Thursday 10 March 2016

’ಬಾನಂಗಳದಿ ಒಂದು ರಾತ್ರಿ’ ಇಡೀ ರಾತ್ರಿಯ ಆಕಾಶವೀಕ್ಷಣೆ
          ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ನಿರಂತರವಾಗಿ ಸುಮಾರು ೧೨ ಗಂಟೆಗಳ ಕಾಲ ಆಕಾಶದಲ್ಲಿ ಮೂಡುವ ಗ್ರಹ ತಾರೆಗಳ ಬೆಳಕಿನ ಚಿತ್ತಾರವನ್ನು ವೀಕ್ಷಿಸುವ ವಿಶಿಷ್ಟ ಕಾರ್ಯಕ್ರಮವೊಂದು ಮಾರ್ಚ್ ೬ನೇ ತಾರೀಕು ಭಾನುವಾರ ಸಂಜೆ ೬ ಗಂಟೆಯಿಂದ ಮರುದಿನ ಮುಂಜಾನೆ ೬ ರ ವರೆಗೆ ನಡೆಯಿತು. ಎಸ್.ಎಸ್.ಎ(ಸರ್ವ ಶಿಕ್ಷಾ ಅಭಿಯಾನ) ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಬಂಟ್ವಾಳ ಘಟಕದ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮ ಅನಾವರಣಗೊಂಡದ್ದು ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಶಾಲೆಯ ಅಂಗಳದಲ್ಲಿ. ಸರಳ ಸಮಾರಂಭದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರೊ. ಜಯಂತ್ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮುಂದುವರೆಯಿತು.



     ಹಗಲು - ರಾತ್ರಿ, ಹುಣ್ಣಿಮೆ – ಅಮಾವಾಸ್ಯೆ, ತಿಂಗಳು, ವರ್ಷ, ಋತುಮಾನಗಳು ಮುಂತಾದ ಕಾಲಗಣನೆಯ ಪ್ರಾಥಮಿಕ ವಿಚಾರಗಳೊಂದಿಗೆ ಚರ್ಚೆ ಪ್ರಾರಂಭಗೊಂಡಿತು. ಸರಿಯಾಗಿ ಕತ್ತಲು ಆವರಿಸಿದ ನಂತರ ಬರಿಗಣ್ಣಿನಿಂದಲೇ  ಆಕಾಶವೀಕ್ಷಣೆ ಆರಂಭಗೊಂಡಿತು. ಪಶ್ಚಿಮ ದಿಗಂತದಿಂದ ಸುಮಾರು ಮೇಲೆ ಕಾಣುತ್ತಿದ್ದ ಮಹಾವ್ಯಾಧ ನಕ್ಷತ್ರಪುಂಜವನ್ನು ಮೊದಲಿಗೆ ಎಲ್ಲರೂ ನೋಡಿದರು. ಮೂರು ನಕ್ಷತ್ರಗಳು ಸೇರಿ ಒಂದೇ ರೇಖೆಯಲ್ಲಿರುವಂತೆ ಕಾಣುವ ವ್ಯಾಧನ ಸೊಂಟಪಟ್ಟಿ, ಅದರ ಕೆಳಗೆ ಎರಡು ನಕ್ಷತ್ರಗಳು ಅವನ ಕಾಲುಗಳು, ಮೇಲೆ ಎರಡು ನಕ್ಷತ್ರಗಳು ಅವನ ಭುಜಗಳು, ಅದರಮೇಲೊಂದು ನಕ್ಷತ್ರ ಅವನ ತಲೆ, ಸೊಂಟದ ಹತ್ತಿರದ ನಕ್ಷತ್ರಗಳ ಗುಂಪು ಅವನ ಕತ್ತಿ, ಸೊಂಟದಮುಂದಿರುವ ನಕ್ಷತ್ರಗಳು ಅವನ ಗುರಾಣಿ, ಹೀಗೆ ನಕ್ಷತ್ರ ಚುಕ್ಕಿಗಳಿಗೆ ಕಾಲ್ಪನಿಕ ಗೆರೆಗಳನ್ನು ಎಳೆದುಕೊಂಡು ಬೇಟೆಗಾರನ ಚಿತ್ರವೊಂದು ಮೂಡಿದಾಗ ಎಲ್ಲರೂ ಮಕ್ಕಳಂತೆ ಹಾ.. ಗೊತ್ತಾಯ್ತು ಎಂದು ಸಂತಸ ಪಟ್ಟರು. ಹೀಗೇ ಅಕ್ಕ-ಪಕ್ಕದ ಮಹಾಶ್ವಾನ ನಕ್ಷತ್ರಪುಂಜ, ವೃಷಭ ನಕ್ಷತ್ರಪುಂಜಗಳನ್ನು ಗುರುತಿಸಿ ಬೇಟೆಗಾರನೊಬ್ಬ ತನ್ನ ನಾಯಿಯ ಜೊತೆ ವೃಶಭವೆಂಬ ಹೋರಿಯನ್ನು ಬೇಟೆಯಾಡುತ್ತ ಸಾಗಿದ್ದಾನೆ ಎಂದು ಕಥೆಯನ್ನು ಹೆಣೆದಾಗ ಆಕಾಶದ ಈ ಬೆಳಕಿನ ಚಿತ್ತಾರ ಕಥೆಯಾಗಿ ಮಿನುಗಲಾರಂಭಿಸಿತು.
          ಹೀಗೇ ಗಮನಿಸುತ್ತಾ ಹೋದಾಗ ಆಕಾಶದ ತುಂಬೆಲ್ಲಾ ಹಲವು ಆಕೃತಿಗಳು. ಒಂದೆಡೆ ೫ ನಕ್ಷತ್ರಗಳನ್ನು ಸೇರಿಸಿದಾಗ ಪಂಚಭುಜಾಕ್ರುತಿ, ಅದರಿಂದ ಸ್ವಲ್ಪ ದೂರದಲ್ಲಿ ಎರಡು ನಕ್ಷತ್ರಗಳು ಪರಸ್ಪರ ಒಂದಾಗಲು ಕಾಯುತ್ತಿರುವ ಪ್ರೇಮಿಗಳಂತೆ ಕಂಡವು. ಪರಸ್ಪರ ಅಂಟಿಕೊಂಡೇ ಇರುವಂತೆ ಕಾಣುವ ಈ ನಕ್ಷತ್ರಗಳ ಗುಂಪೇ ಮಿಥುನ ರಾಶಿ. ಅಲ್ಲಿಂದ ಮತ್ತಷ್ಟು ಬಲಕ್ಕೆ ಗಮನಿಸಿದಾಗ ದೊಡ್ದ ಗಾಳಿಪಟವೊಂದು ಸೂತ್ರ ಕಡಿದು ಹಾರಿದಂತೆ ಕಂಡಿತು. ಇದನ್ನೇ ಸಪ್ತರ್ಷಿ ಮಂಡಲ ಎನ್ನುತ್ತಾರೆ. ಈ ಗಾಳಿಪಟದ ಬಾಲದ ನಡುವೆ ಎರಡು ಜೋಡಿ ನಕ್ಷತ್ರಗಳು ಕಾಣುತ್ತವೆ. ಒಂದಕ್ಕೊಂದು ಅಂಟಿಕೊಂಡಂತೆ ಜೊತೆಯಾಗಿರುವ ಈ ಎರಡು ನಕ್ಷತ್ರಗಳೇ ಸುಮಧುರ ದಾಂಪತ್ಯದ ಸಂಕೇತಗಳಾದ ಅರುಂಧತೀ – ವಸಿಷ್ಟರು. ಮದುವೆಯ ದಿನದಂದು ಹಲವರು ಹಾಡಹಗಲೇ ಈ ಜೊಡಿ ನಕ್ಷತ್ರಗಳನ್ನು ಕಂಡಿರುತ್ತಾರೆ, ಏಕೆಂದರೆ ಓ ಆಕಡೆ ಕೈ ತೋರಿಸಿ ನೋಡಿ ಎಂದು ಪುರೋಹಿತರು ತೋರಿಸಿರುತ್ತಾರೆ.
        ಹೀಗೇ ಮತ್ತೊಂದಿಶ್ಟು ಪೂರ್ವಕ್ಕೆ ಸರಿದರೆ ಕಾಣುವ ಸಿಂಹರಾಶಿಯಲ್ಲಿ ಮಿನುಗದೇ ಸ್ಥಿರವಾಗಿ ಬೆಳಗುವ ಆಕಾಶಕಾಯವೊಂದು ಕಂಡಿತು. ಇದೇನಿದು ನೋಡಿಯೇ ಬಿಡೋಣ ಎಂದು ಟೆಲಿಸ್ಕೋಪ್ ಜೋಡಿಸಿ ಗಮನಿಸಿದಾಗ ಆ ಬೆಳಗುವ ಬೆಳಕಿನ ಸುತ್ತ ಪುಟ್ಟ ಮೂರು ಚುಕ್ಕೆಗಳೂ ಗೋಚರಿಸಿದವು. ಹಾ .. ಇದು ನಕ್ಷತ್ರ ಅಲ್ಲ, ಇದು ಗ್ರಹ, ಇದುವೇ ಸೌರಮಮ್ಡಲದ ಅತೀ ದೊಡ್ಡ ಗ್ರಹ ಗುರು. ಅದರ ಸುತ್ತಲೂ ಕಂಡ ಚುಕ್ಕೆಗಳು ಅದರ ಚಂದ್ರರು( ಉಪಗ್ರಹಗಳು).
ಗೆಲಿಲಿಯೋ ಎಂಬಾತ ತನ್ನ ಬಳಿಯಿದ್ದ ದೂರದರ್ಶಕವೆಂಬ ಸಾಧನದಿಂದ ದುರುತಿಸಿದ ಮೊದಲ ಆಕಾಶಕಾಯ ಇದೇ ಅಲ್ಲವೇ.


      ಗುರುಗ್ರಹದ ದರ್ಶನ ಭಾಗ್ಯ ಸೌರಮಂಡಲದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದವು. ಭೂಮಿಯಲ್ಲಿ ನಿಂತು ನೋಡಿದಾಗ ಎಲ್ಲವೂ ನಮ್ಮ ಸುತ್ತಲೂ ಸುತ್ತಿದಂತೆ ಕಂಡರೂ, ಸೌರಮಂಡಲದ ಕೇಂದ್ರಬಿಂದು ಸೂರ್ಯ. ನಮ್ಮ ಭೂಮಿಯನ್ನೂ ಸೇರಿಸಿ ಸೌರಮಂಡಾಲದ ಎಲ್ಲ ಕಾಯಗಳೂ ಸೂರ್ಯನ ಸುತ್ತ ಸುತ್ತುತ್ತವೆ ಎಂಬುದನ್ನು  ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದ ಅಗತ್ಯವಿತ್ತು. ಅದಕ್ಕಾಗಿ ಸೂರ್ಯ, ಚಂದ್ರ, ಭೂಮಿ, ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಗಳನ್ನು ಪ್ರತಿನಿಧಿಸುವ ಬಾಲ್ ಗಳು ಆಕಾಶವೆಂಬ ಅವಕಾಶದಲ್ಲಿ ತೇಲುತ್ತಿರುವಂತೆ ಕಾಣುವ ಮಾದರಿ ಬಳಸಿ ಪ್ರೊ.ಜಯಂತ್ ವಿವರಿಸಲಾರಂಭಿಸಿದರು. ಭೂಮಿ ತನ್ನ ಅಕ್ಷದಲ್ಲಿ ಸುತ್ತುವುದು, ಜೊತೆಗೆ ಸೂರ್ಯನಿಗೆ ಸುತ್ತುಬರುವುದು ಮತ್ತು ಚಂದ್ರ ಭೂಮಿಯ ಸುತ್ತ ಸುತ್ತುವುದು, ಇದರಿಂದ ಉಂಟಾಗುವ ಹಗಲು - ರಾತ್ರಿ, ಹುಣ್ಣಿಮೆ – ಅಮಾವಾಸ್ಯೆ, ಋತುಮಾನಗಳು, ವರ್ಷ ಎಂಬ ಬದಲಾವಣೆಗಳು ಒಂದಿಷ್ಟು ಸ್ಪಷ್ಟವಾದವು. ಹೀಗೇ ಹಲವಾರು ಪ್ರಶ್ನೆ ಉತ್ತರಗಳ ಸರಣಿ ಮುಂದುವರೆದು ನಮ್ಮ ಆಕಾಶದ ಬಗೆಗಿನ ಹಲವಾರು ಕುತೂಹಲದ ಸಂಗತಿಗಳನ್ನು ಬಿಚಿಡುತ್ತಾ ಹೋಯಿತು.

        ತರಗತಿಯ ಕೋಣೆಯೊಳಗೆ ನಡೆದ ಸುದೀರ್ಘ ಚರ್ಚೆ ಮುಗಿಸಿ ಹೊರಬಂದಾಗ ಪೂರ್ವದಿಕ್ಕಿನ ಆಕಾಶದಲ್ಲಾಗಲೇ ಮಂಗಳ ಗ್ರಹ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಟೆಲಿಸ್ಕೋಪ್ ಅನ್ನು ಆಕಡೆಗೆ ತಿರುಗಿಸಿ, ಮಂಗಳನ ಅಂಗಳಕ್ಕೆ ದೃಷ್ಟಿ ನೆಟ್ಟಾಗ ಕಂಡದ್ದು ಕೇಸರಿ ಬಣ್ಣ. ಮಂಗಳ ಗ್ರಹದ ಎಡಕ್ಕೆ ಸ್ವಲ್ಪ ದೂರದಲ್ಲಿ ಇನ್ನೊಂದು ಗ್ರಹ ಕಾಣಿಸುತ್ತಿತ್ತು. ಯಾವುದೆಂದು ನೋಡಲು ಟೆಲಿಸ್ಕೋಪ್ ಆಕಡೆಗೆ ತಿರುಗಿಸಿದರೆ ಚೆಂಡಿನ ಸುತ್ತ ರಿಂಗಿನಂತೆ ಕಾಣುವ ರಚನೆ. ಅದುವೇ ಶನಿ ಗ್ರಹ. ಶನಿಯ ಬಳೆಯ ರಚನೆ ಚೆನ್ನಗಿಯೇ ಕಾಣಿಸಿತು. ತುಸು ಮೋಡಕವಿದ ವಾತಾವರಣ ಅಗಾಗ ಮೂಡುತ್ತಿದ್ದ ಚಿತ್ರವನ್ನು ಮಸುಕು ಮಾಡುತ್ತಿತ್ತು.
    ಈ ಎರಡು ಗ್ರಹಗಳ ನಡುವೆ ಬಾಲವೆತ್ತಿ ಕುಟುಕಲು ಹವಣಿಸುತ್ತಿರುವ ಚೇಳಿನಂತೆ ಕಾಣುವ ವೃಶ್ಚಿಕ ರಾಶಿ ಮೋಡಗಳ ಮರೆಯಿಂದ ಸರಿದು ಸ್ಪಷ್ಟವಾಗತೊಡಗಿತು. ರಾತ್ರಿಯ ಆಕಾಶದಿ ಕಾಣುವ ನಕ್ಷತ್ರಪುಂಜಗಳಲ್ಲಿ ವೃಶ್ಚಿಕ ಅತ್ಯಂತ ನಯನಮನೋಹರ. ಒಮ್ಮೆನೋಡಿದರೆ ಮತ್ತೆ ನೋಡುವಂತೆ ಮಾಡುವ ಆಕರ್ಷಣೆ ಅದರದ್ದು. ಇಷ್ಟು ಹೊತ್ತಿಗೆ ಆಡುಮಾತಿನಲ್ಲಿ ಬೆಳ್ಳಿ ಚುಕ್ಕಿ ಎಂದು ಕರೆಸಿಕೊಳ್ಳುವ ಶುಕ್ರಗ್ರಹ ಪೂರ್ವದಿಗಂತದಿಂದ ಮೇಲೆದ್ದುಬಂದಿದ್ದ. ಟೆಲಿಸ್ಕೋಪ್ ಮೂಲಕ ಅವನ ದರುಶನವೂ ಆಯಿತು. ತುಸು ಹೊತ್ತಿನಲ್ಲೇ ಕೃಷ್ಣ ಪಕ್ಷ ದ್ವಾದಶಿಯ ಕ್ಷೀಣ ಚಂದ್ರ ಗೋಚರಿಸಲಾರಂಭಿಸಿದ. ಅವನನ್ನೂ ಟೆಲಿಸ್ಕೋಪ್ ಮೂಲಕ ನೋಡಿ ಚಂದ್ರದರುಶನ ಭಾಗ್ಯ ಪಡೆದದ್ದಾಯಿತು.
    ರಾತ್ರೆಯಿಡೀ ನಾವು ನೋಡಿದ ಗ್ರಹತಾರೆಗಳೆಲ್ಲಾ ನಿಧಾನವಾಗಿ ಪೂರ್ವಕ್ಕೆ ಸರಿದು ಮಾಯವಾಗಲಾರಂಭಿಸಿದ್ದವು. ದಿನಕರನಾದ ಸೂರ್ಯ ಉದಯವಾಗುವ ಲಕ್ಷಣ ಗೋಚರಿಸಲಾರಂಭಿಸಿತ್ತು. ರಾತ್ರೆ ಚೆನ್ನಾಗಿಯೇ ಉಂಡ ರುಚಿಕರವಾದ ಗಂಜಿ ಊಟ, ಮಧ್ಯೆ ಮಧ್ಯೆ ಕುಡಿದ ಬಿಸಿಬಿಸಿ ಚಹಾಗಳೆಲ್ಲ ಕರಗಿ ಹೊಟ್ಟೆ ಚುರುಗುಟ್ಟುತ್ತಿತ್ತು. ಕಾರ್ಯಕ್ರಮ ಆಯೋಜಿಸಿದ ತಾಳಿತ್ತನೂಜಿ ಶಾಲೆಯ ಮಿತ್ರರು ಆಗಲೇ ಅವಲಕ್ಕಿ ಮತ್ತು ಬಿಸಿಬಿಸಿ ಚಹಾ ತಯಾರಾಗಿದೆ ಬನ್ನಿ ಎಂದು ಕರೆಯುತ್ತಿದ್ದರು.






     ಹಳ್ಳಿ ಶಾಲೆಯ ಸುಂದರ ಪರಿಸರ, ಎಸ್.ಎಸ್.ಎ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಬಂಟ್ವಾಳ ಹಾಗೂ ತಾಳಿತ್ತನೂಜಿ ಶಾಲಾ ಶಿಕ್ಷಕರ ಆತ್ಮೀಯ ಆಯೋಜನೆ, ನಿವೃತ್ತಿಯಾದರೂ ಪ್ರವೃತ್ತಿ ಬಿಡದ ಪ್ರೊ.ಜಯಂತ್ ಅವರ ಸಮರ್ಥ ಮಾರ್ಗದರ್ಶನ, ಸೇರಿದ್ದ ಶಿಕ್ಷಕ ಹಾಗೂ ವಿದ್ಯಾರ್ಥಿ ಮಿತ್ರರಲ್ಲಿ ಆಕಾಶವೀಕ್ಷಣೆಯ ಆಸಕ್ತಿ ಹುಟ್ಟಿಸುವಲ್ಲಿ ಯಶಸ್ವಿಯಾದದ್ದರಲ್ಲಿ ಸಂಶಯವೇ ಇಲ್ಲ.
    
   

No comments:

Post a Comment