Sunday, 2 April 2017

ದಿನಾಂಕ ೦೨-೦೪-೨೦೧೭ ರಂದು ರಾಮಕೃಷ್ಣ ಮಠ ಮಂಗಳೂರು ಇಲ್ಲಿ ಪ್ರದರ್ಶನಗೊಂಡ ಥಿಯೇಟರ್ ಯಕ್ಷ, ಉಡುಪಿ ಅಭಿನಯದ ಚಕ್ರವ್ಯೂಹ ಎಂಬ ಎಂಬ ಯಕ್ಷರೂಪಕದ ಚಿತ್ರಸಂಚಿ 

Thursday, 10 March 2016

’ಬಾನಂಗಳದಿ ಒಂದು ರಾತ್ರಿ’ ಇಡೀ ರಾತ್ರಿಯ ಆಕಾಶವೀಕ್ಷಣೆ
          ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ನಿರಂತರವಾಗಿ ಸುಮಾರು ೧೨ ಗಂಟೆಗಳ ಕಾಲ ಆಕಾಶದಲ್ಲಿ ಮೂಡುವ ಗ್ರಹ ತಾರೆಗಳ ಬೆಳಕಿನ ಚಿತ್ತಾರವನ್ನು ವೀಕ್ಷಿಸುವ ವಿಶಿಷ್ಟ ಕಾರ್ಯಕ್ರಮವೊಂದು ಮಾರ್ಚ್ ೬ನೇ ತಾರೀಕು ಭಾನುವಾರ ಸಂಜೆ ೬ ಗಂಟೆಯಿಂದ ಮರುದಿನ ಮುಂಜಾನೆ ೬ ರ ವರೆಗೆ ನಡೆಯಿತು. ಎಸ್.ಎಸ್.ಎ(ಸರ್ವ ಶಿಕ್ಷಾ ಅಭಿಯಾನ) ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಬಂಟ್ವಾಳ ಘಟಕದ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮ ಅನಾವರಣಗೊಂಡದ್ದು ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಶಾಲೆಯ ಅಂಗಳದಲ್ಲಿ. ಸರಳ ಸಮಾರಂಭದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರೊ. ಜಯಂತ್ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮುಂದುವರೆಯಿತು.     ಹಗಲು - ರಾತ್ರಿ, ಹುಣ್ಣಿಮೆ – ಅಮಾವಾಸ್ಯೆ, ತಿಂಗಳು, ವರ್ಷ, ಋತುಮಾನಗಳು ಮುಂತಾದ ಕಾಲಗಣನೆಯ ಪ್ರಾಥಮಿಕ ವಿಚಾರಗಳೊಂದಿಗೆ ಚರ್ಚೆ ಪ್ರಾರಂಭಗೊಂಡಿತು. ಸರಿಯಾಗಿ ಕತ್ತಲು ಆವರಿಸಿದ ನಂತರ ಬರಿಗಣ್ಣಿನಿಂದಲೇ  ಆಕಾಶವೀಕ್ಷಣೆ ಆರಂಭಗೊಂಡಿತು. ಪಶ್ಚಿಮ ದಿಗಂತದಿಂದ ಸುಮಾರು ಮೇಲೆ ಕಾಣುತ್ತಿದ್ದ ಮಹಾವ್ಯಾಧ ನಕ್ಷತ್ರಪುಂಜವನ್ನು ಮೊದಲಿಗೆ ಎಲ್ಲರೂ ನೋಡಿದರು. ಮೂರು ನಕ್ಷತ್ರಗಳು ಸೇರಿ ಒಂದೇ ರೇಖೆಯಲ್ಲಿರುವಂತೆ ಕಾಣುವ ವ್ಯಾಧನ ಸೊಂಟಪಟ್ಟಿ, ಅದರ ಕೆಳಗೆ ಎರಡು ನಕ್ಷತ್ರಗಳು ಅವನ ಕಾಲುಗಳು, ಮೇಲೆ ಎರಡು ನಕ್ಷತ್ರಗಳು ಅವನ ಭುಜಗಳು, ಅದರಮೇಲೊಂದು ನಕ್ಷತ್ರ ಅವನ ತಲೆ, ಸೊಂಟದ ಹತ್ತಿರದ ನಕ್ಷತ್ರಗಳ ಗುಂಪು ಅವನ ಕತ್ತಿ, ಸೊಂಟದಮುಂದಿರುವ ನಕ್ಷತ್ರಗಳು ಅವನ ಗುರಾಣಿ, ಹೀಗೆ ನಕ್ಷತ್ರ ಚುಕ್ಕಿಗಳಿಗೆ ಕಾಲ್ಪನಿಕ ಗೆರೆಗಳನ್ನು ಎಳೆದುಕೊಂಡು ಬೇಟೆಗಾರನ ಚಿತ್ರವೊಂದು ಮೂಡಿದಾಗ ಎಲ್ಲರೂ ಮಕ್ಕಳಂತೆ ಹಾ.. ಗೊತ್ತಾಯ್ತು ಎಂದು ಸಂತಸ ಪಟ್ಟರು. ಹೀಗೇ ಅಕ್ಕ-ಪಕ್ಕದ ಮಹಾಶ್ವಾನ ನಕ್ಷತ್ರಪುಂಜ, ವೃಷಭ ನಕ್ಷತ್ರಪುಂಜಗಳನ್ನು ಗುರುತಿಸಿ ಬೇಟೆಗಾರನೊಬ್ಬ ತನ್ನ ನಾಯಿಯ ಜೊತೆ ವೃಶಭವೆಂಬ ಹೋರಿಯನ್ನು ಬೇಟೆಯಾಡುತ್ತ ಸಾಗಿದ್ದಾನೆ ಎಂದು ಕಥೆಯನ್ನು ಹೆಣೆದಾಗ ಆಕಾಶದ ಈ ಬೆಳಕಿನ ಚಿತ್ತಾರ ಕಥೆಯಾಗಿ ಮಿನುಗಲಾರಂಭಿಸಿತು.
          ಹೀಗೇ ಗಮನಿಸುತ್ತಾ ಹೋದಾಗ ಆಕಾಶದ ತುಂಬೆಲ್ಲಾ ಹಲವು ಆಕೃತಿಗಳು. ಒಂದೆಡೆ ೫ ನಕ್ಷತ್ರಗಳನ್ನು ಸೇರಿಸಿದಾಗ ಪಂಚಭುಜಾಕ್ರುತಿ, ಅದರಿಂದ ಸ್ವಲ್ಪ ದೂರದಲ್ಲಿ ಎರಡು ನಕ್ಷತ್ರಗಳು ಪರಸ್ಪರ ಒಂದಾಗಲು ಕಾಯುತ್ತಿರುವ ಪ್ರೇಮಿಗಳಂತೆ ಕಂಡವು. ಪರಸ್ಪರ ಅಂಟಿಕೊಂಡೇ ಇರುವಂತೆ ಕಾಣುವ ಈ ನಕ್ಷತ್ರಗಳ ಗುಂಪೇ ಮಿಥುನ ರಾಶಿ. ಅಲ್ಲಿಂದ ಮತ್ತಷ್ಟು ಬಲಕ್ಕೆ ಗಮನಿಸಿದಾಗ ದೊಡ್ದ ಗಾಳಿಪಟವೊಂದು ಸೂತ್ರ ಕಡಿದು ಹಾರಿದಂತೆ ಕಂಡಿತು. ಇದನ್ನೇ ಸಪ್ತರ್ಷಿ ಮಂಡಲ ಎನ್ನುತ್ತಾರೆ. ಈ ಗಾಳಿಪಟದ ಬಾಲದ ನಡುವೆ ಎರಡು ಜೋಡಿ ನಕ್ಷತ್ರಗಳು ಕಾಣುತ್ತವೆ. ಒಂದಕ್ಕೊಂದು ಅಂಟಿಕೊಂಡಂತೆ ಜೊತೆಯಾಗಿರುವ ಈ ಎರಡು ನಕ್ಷತ್ರಗಳೇ ಸುಮಧುರ ದಾಂಪತ್ಯದ ಸಂಕೇತಗಳಾದ ಅರುಂಧತೀ – ವಸಿಷ್ಟರು. ಮದುವೆಯ ದಿನದಂದು ಹಲವರು ಹಾಡಹಗಲೇ ಈ ಜೊಡಿ ನಕ್ಷತ್ರಗಳನ್ನು ಕಂಡಿರುತ್ತಾರೆ, ಏಕೆಂದರೆ ಓ ಆಕಡೆ ಕೈ ತೋರಿಸಿ ನೋಡಿ ಎಂದು ಪುರೋಹಿತರು ತೋರಿಸಿರುತ್ತಾರೆ.
        ಹೀಗೇ ಮತ್ತೊಂದಿಶ್ಟು ಪೂರ್ವಕ್ಕೆ ಸರಿದರೆ ಕಾಣುವ ಸಿಂಹರಾಶಿಯಲ್ಲಿ ಮಿನುಗದೇ ಸ್ಥಿರವಾಗಿ ಬೆಳಗುವ ಆಕಾಶಕಾಯವೊಂದು ಕಂಡಿತು. ಇದೇನಿದು ನೋಡಿಯೇ ಬಿಡೋಣ ಎಂದು ಟೆಲಿಸ್ಕೋಪ್ ಜೋಡಿಸಿ ಗಮನಿಸಿದಾಗ ಆ ಬೆಳಗುವ ಬೆಳಕಿನ ಸುತ್ತ ಪುಟ್ಟ ಮೂರು ಚುಕ್ಕೆಗಳೂ ಗೋಚರಿಸಿದವು. ಹಾ .. ಇದು ನಕ್ಷತ್ರ ಅಲ್ಲ, ಇದು ಗ್ರಹ, ಇದುವೇ ಸೌರಮಮ್ಡಲದ ಅತೀ ದೊಡ್ಡ ಗ್ರಹ ಗುರು. ಅದರ ಸುತ್ತಲೂ ಕಂಡ ಚುಕ್ಕೆಗಳು ಅದರ ಚಂದ್ರರು( ಉಪಗ್ರಹಗಳು).
ಗೆಲಿಲಿಯೋ ಎಂಬಾತ ತನ್ನ ಬಳಿಯಿದ್ದ ದೂರದರ್ಶಕವೆಂಬ ಸಾಧನದಿಂದ ದುರುತಿಸಿದ ಮೊದಲ ಆಕಾಶಕಾಯ ಇದೇ ಅಲ್ಲವೇ.


      ಗುರುಗ್ರಹದ ದರ್ಶನ ಭಾಗ್ಯ ಸೌರಮಂಡಲದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದವು. ಭೂಮಿಯಲ್ಲಿ ನಿಂತು ನೋಡಿದಾಗ ಎಲ್ಲವೂ ನಮ್ಮ ಸುತ್ತಲೂ ಸುತ್ತಿದಂತೆ ಕಂಡರೂ, ಸೌರಮಂಡಲದ ಕೇಂದ್ರಬಿಂದು ಸೂರ್ಯ. ನಮ್ಮ ಭೂಮಿಯನ್ನೂ ಸೇರಿಸಿ ಸೌರಮಂಡಾಲದ ಎಲ್ಲ ಕಾಯಗಳೂ ಸೂರ್ಯನ ಸುತ್ತ ಸುತ್ತುತ್ತವೆ ಎಂಬುದನ್ನು  ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದ ಅಗತ್ಯವಿತ್ತು. ಅದಕ್ಕಾಗಿ ಸೂರ್ಯ, ಚಂದ್ರ, ಭೂಮಿ, ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಗಳನ್ನು ಪ್ರತಿನಿಧಿಸುವ ಬಾಲ್ ಗಳು ಆಕಾಶವೆಂಬ ಅವಕಾಶದಲ್ಲಿ ತೇಲುತ್ತಿರುವಂತೆ ಕಾಣುವ ಮಾದರಿ ಬಳಸಿ ಪ್ರೊ.ಜಯಂತ್ ವಿವರಿಸಲಾರಂಭಿಸಿದರು. ಭೂಮಿ ತನ್ನ ಅಕ್ಷದಲ್ಲಿ ಸುತ್ತುವುದು, ಜೊತೆಗೆ ಸೂರ್ಯನಿಗೆ ಸುತ್ತುಬರುವುದು ಮತ್ತು ಚಂದ್ರ ಭೂಮಿಯ ಸುತ್ತ ಸುತ್ತುವುದು, ಇದರಿಂದ ಉಂಟಾಗುವ ಹಗಲು - ರಾತ್ರಿ, ಹುಣ್ಣಿಮೆ – ಅಮಾವಾಸ್ಯೆ, ಋತುಮಾನಗಳು, ವರ್ಷ ಎಂಬ ಬದಲಾವಣೆಗಳು ಒಂದಿಷ್ಟು ಸ್ಪಷ್ಟವಾದವು. ಹೀಗೇ ಹಲವಾರು ಪ್ರಶ್ನೆ ಉತ್ತರಗಳ ಸರಣಿ ಮುಂದುವರೆದು ನಮ್ಮ ಆಕಾಶದ ಬಗೆಗಿನ ಹಲವಾರು ಕುತೂಹಲದ ಸಂಗತಿಗಳನ್ನು ಬಿಚಿಡುತ್ತಾ ಹೋಯಿತು.

        ತರಗತಿಯ ಕೋಣೆಯೊಳಗೆ ನಡೆದ ಸುದೀರ್ಘ ಚರ್ಚೆ ಮುಗಿಸಿ ಹೊರಬಂದಾಗ ಪೂರ್ವದಿಕ್ಕಿನ ಆಕಾಶದಲ್ಲಾಗಲೇ ಮಂಗಳ ಗ್ರಹ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಟೆಲಿಸ್ಕೋಪ್ ಅನ್ನು ಆಕಡೆಗೆ ತಿರುಗಿಸಿ, ಮಂಗಳನ ಅಂಗಳಕ್ಕೆ ದೃಷ್ಟಿ ನೆಟ್ಟಾಗ ಕಂಡದ್ದು ಕೇಸರಿ ಬಣ್ಣ. ಮಂಗಳ ಗ್ರಹದ ಎಡಕ್ಕೆ ಸ್ವಲ್ಪ ದೂರದಲ್ಲಿ ಇನ್ನೊಂದು ಗ್ರಹ ಕಾಣಿಸುತ್ತಿತ್ತು. ಯಾವುದೆಂದು ನೋಡಲು ಟೆಲಿಸ್ಕೋಪ್ ಆಕಡೆಗೆ ತಿರುಗಿಸಿದರೆ ಚೆಂಡಿನ ಸುತ್ತ ರಿಂಗಿನಂತೆ ಕಾಣುವ ರಚನೆ. ಅದುವೇ ಶನಿ ಗ್ರಹ. ಶನಿಯ ಬಳೆಯ ರಚನೆ ಚೆನ್ನಗಿಯೇ ಕಾಣಿಸಿತು. ತುಸು ಮೋಡಕವಿದ ವಾತಾವರಣ ಅಗಾಗ ಮೂಡುತ್ತಿದ್ದ ಚಿತ್ರವನ್ನು ಮಸುಕು ಮಾಡುತ್ತಿತ್ತು.
    ಈ ಎರಡು ಗ್ರಹಗಳ ನಡುವೆ ಬಾಲವೆತ್ತಿ ಕುಟುಕಲು ಹವಣಿಸುತ್ತಿರುವ ಚೇಳಿನಂತೆ ಕಾಣುವ ವೃಶ್ಚಿಕ ರಾಶಿ ಮೋಡಗಳ ಮರೆಯಿಂದ ಸರಿದು ಸ್ಪಷ್ಟವಾಗತೊಡಗಿತು. ರಾತ್ರಿಯ ಆಕಾಶದಿ ಕಾಣುವ ನಕ್ಷತ್ರಪುಂಜಗಳಲ್ಲಿ ವೃಶ್ಚಿಕ ಅತ್ಯಂತ ನಯನಮನೋಹರ. ಒಮ್ಮೆನೋಡಿದರೆ ಮತ್ತೆ ನೋಡುವಂತೆ ಮಾಡುವ ಆಕರ್ಷಣೆ ಅದರದ್ದು. ಇಷ್ಟು ಹೊತ್ತಿಗೆ ಆಡುಮಾತಿನಲ್ಲಿ ಬೆಳ್ಳಿ ಚುಕ್ಕಿ ಎಂದು ಕರೆಸಿಕೊಳ್ಳುವ ಶುಕ್ರಗ್ರಹ ಪೂರ್ವದಿಗಂತದಿಂದ ಮೇಲೆದ್ದುಬಂದಿದ್ದ. ಟೆಲಿಸ್ಕೋಪ್ ಮೂಲಕ ಅವನ ದರುಶನವೂ ಆಯಿತು. ತುಸು ಹೊತ್ತಿನಲ್ಲೇ ಕೃಷ್ಣ ಪಕ್ಷ ದ್ವಾದಶಿಯ ಕ್ಷೀಣ ಚಂದ್ರ ಗೋಚರಿಸಲಾರಂಭಿಸಿದ. ಅವನನ್ನೂ ಟೆಲಿಸ್ಕೋಪ್ ಮೂಲಕ ನೋಡಿ ಚಂದ್ರದರುಶನ ಭಾಗ್ಯ ಪಡೆದದ್ದಾಯಿತು.
    ರಾತ್ರೆಯಿಡೀ ನಾವು ನೋಡಿದ ಗ್ರಹತಾರೆಗಳೆಲ್ಲಾ ನಿಧಾನವಾಗಿ ಪೂರ್ವಕ್ಕೆ ಸರಿದು ಮಾಯವಾಗಲಾರಂಭಿಸಿದ್ದವು. ದಿನಕರನಾದ ಸೂರ್ಯ ಉದಯವಾಗುವ ಲಕ್ಷಣ ಗೋಚರಿಸಲಾರಂಭಿಸಿತ್ತು. ರಾತ್ರೆ ಚೆನ್ನಾಗಿಯೇ ಉಂಡ ರುಚಿಕರವಾದ ಗಂಜಿ ಊಟ, ಮಧ್ಯೆ ಮಧ್ಯೆ ಕುಡಿದ ಬಿಸಿಬಿಸಿ ಚಹಾಗಳೆಲ್ಲ ಕರಗಿ ಹೊಟ್ಟೆ ಚುರುಗುಟ್ಟುತ್ತಿತ್ತು. ಕಾರ್ಯಕ್ರಮ ಆಯೋಜಿಸಿದ ತಾಳಿತ್ತನೂಜಿ ಶಾಲೆಯ ಮಿತ್ರರು ಆಗಲೇ ಅವಲಕ್ಕಿ ಮತ್ತು ಬಿಸಿಬಿಸಿ ಚಹಾ ತಯಾರಾಗಿದೆ ಬನ್ನಿ ಎಂದು ಕರೆಯುತ್ತಿದ್ದರು.


     ಹಳ್ಳಿ ಶಾಲೆಯ ಸುಂದರ ಪರಿಸರ, ಎಸ್.ಎಸ್.ಎ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಬಂಟ್ವಾಳ ಹಾಗೂ ತಾಳಿತ್ತನೂಜಿ ಶಾಲಾ ಶಿಕ್ಷಕರ ಆತ್ಮೀಯ ಆಯೋಜನೆ, ನಿವೃತ್ತಿಯಾದರೂ ಪ್ರವೃತ್ತಿ ಬಿಡದ ಪ್ರೊ.ಜಯಂತ್ ಅವರ ಸಮರ್ಥ ಮಾರ್ಗದರ್ಶನ, ಸೇರಿದ್ದ ಶಿಕ್ಷಕ ಹಾಗೂ ವಿದ್ಯಾರ್ಥಿ ಮಿತ್ರರಲ್ಲಿ ಆಕಾಶವೀಕ್ಷಣೆಯ ಆಸಕ್ತಿ ಹುಟ್ಟಿಸುವಲ್ಲಿ ಯಶಸ್ವಿಯಾದದ್ದರಲ್ಲಿ ಸಂಶಯವೇ ಇಲ್ಲ.
    
   

Friday, 29 January 2016

ಸಂಕ್ರಾಂತಿ ಸೈಕಲ್ ಯಾನ ಭಾಗ ೨
 ಸಂಕ್ರಾಂತಿಯ ಸಡಗರಕ್ಕೆಂದು ಹೊಸಾ ಸೈಕಲ್ ಏರಿ ಕುದುರೆಮುಖ ಏರಿದ ಕಥೆ ಅರ್ಧದಲ್ಲೇ ಬಾಕಿಯಾಗಿದೆ. ಹೋದದಿನವೇ ಮರಳುವುದೆಂದು ಹೊರಟ ನಾವು ಮಾಳ ಘಾಟಿ ಏರಿ ಏರಿ ದಣಿದು, ಆ ದಿನವೇ ಹಿಂದೆ ಬರುವ ನಿರ್ಧಾರ ಬದಲಿಸಿ ಅರಣ್ಯವಾಸಿಗಳಾದ ಕಥೆ ಹಿಂದಿನ ಭಾಗದಲ್ಲಿ ಓದಿದ್ದೀರಿ. ಭಗವತೀ ನಿಸರ್ಗಧಾಮದಲ್ಲಿ ಭೂರಿಭೋಜನ ಸವಿದು, ಒಂದಷ್ಟು ಹರಟೆ ಹೊಡೆದು ಮಲಗಿದ ನಮಗೆ ಸೊಂಪಾದ ನಿದ್ದೆ. ಬೆಳಗ್ಗೆ ಎಚ್ಚರವಾಗದೇ ಹೋದರೆ ಎಂದು ಮುಂಜಾಗರೂಕರಾದ ನಾವು ಎಚ್ಚರ ಗಂಟೆ(ಅಲರಾಂ) ಇಟ್ಟೇ ನಿದ್ದೆಗೆ ಜಾರಿದ್ದೆವು.
  ಸೊಂಪಾಗಿ ನಿದ್ದೆ ಬಂದದ್ದರಿಂದ ಬೆಳಗ್ಗೆ ಬೇಗನೇ ಎಚ್ಚರವಾಯಿತು. ಗಡಿಯಾರ ೫.೪೦ ತೋರಿಸುತ್ತಿತ್ತು. ಉಳಿದ ಮೂವರು ಎದ್ದಿರುವರೇ ಎಂದು ನೋಡಿದರೆ ಪುಣ್ಯಾತ್ಮ ಮೀಸೆ ಮಾಮ ಆಗಲೇ ಎದ್ದು ನಿತ್ಯಕರ್ಮಾದಿಯಲ್ಲಿ ತೊಡಗಿದ್ದರು. ಒಬ್ಬೊಬ್ಬರಾಗಿ ಎದ್ದು ತಯಾರಾದೆವು. ಹೊರಗಡೆ ಪೂರ್ತಿ ಮಂಜು ಕವಿದು ೨೦ ಅಡಿ ದೂರವೂ ಕಾಣದಾಗಿತ್ತು. ನಮ್ಮ ಸೈಕಲೇಶ್ವರರನ್ನು ಸಜ್ಜುಗೊಳಿಸಿದೆವು. ಆಡುಗೆಯ ರಾಜು ಎದ್ದು ಒಲೆಮುಂದೆ ಚಳಿ ಕಾಯಿಸುತ್ತಾ ಕುಳಿತಿದ್ದ. ನಮ್ಮನ್ನು ಕಂಡು ಖುಶಿಯಿಂದಲೇ ಚಹಾ ಮಾಡಿಕೊಟ್ಟ. ಎರಡೆರಡು ಚಹಾ ಏರಿಸಿ, ಬಾಡಿ ಎಂಜಿನ್ ಹೀಟ್ ಮಾಡಿಕೊಂಡು ಹೊರಟೆವು. ಮುಖ್ಯ ರಸ್ತೆಯವರೆಗೂ ತಳ್ಳು ಗೋವಿಂದಾ ಮಾಡಿ ಸರಿಯಾಗಿ ೭ ಗಂಟೆಗೆ ನಮ್ಮ ಸವಾರಿ ಶುರು.
  
ಇಂದು ಅವಸರ ಬೇಡ ಆರಾಮಾಗಿ ಹೋಗೋಣ ಎಂದು ಎಲ್ಲರೂ ನಿರ್ಧರಿಸಿದೆವು. ಅಲ್ಲಲ್ಲಿ ನಿಂತು ಫೊಟೊ ತೆಗೆದುಕೊಳ್ಳುತ್ತ ಮುಂದೆ ಸಾಗಿದೆವು. ಗಂಗಾಮೂಲ ದಾಟುತ್ತಿದ್ದಂತೆ ಹಿಂದಿನ ದಿನ ಏರಿ ಬಂದ ೧೮ ಕಿ.ಮೀ ನಿರಾಯಾಸವಾಗಿ ಇಳಿಯಲಾರಂಭಿಸಿತು. ಗುರುತ್ವಾಕರ್ಶಣೆಯ ಸೆಳೆತಕ್ಕೆ ಸಿಕ್ಕು ವೇಗ ಮಿತಿಮೀರಲಾರಂಭಿಸಿದಾಗ ಬ್ರೇಕ್ ನ ಕಡಿವಾಣ ಬೇಕೇ ಬೇಕಾಯ್ತು. ಹಿತವಾದ ಚಳಿ ದೇಹವನ್ನು ತಂಪು ಮಾಡುತ್ತಿತ್ತು. ಹೀಗೇ ಇಳಿದು ಕಡಾರಿಯ ಹೋಟೆಲ್ ಟೂರಿಸ್ಟ್ ನ ಮುಂದೆ ಸೈಕಲ್ ನಿಲ್ಲಿಸಿದಾಗ ಹೊಟ್ಟೆ ತಾಳ ಹಾಕುತ್ತಿತ್ತು. ನೀರ್ ದೋಸೆ, ಇಡ್ಲಿ, ಪುಂಡಿ, ಬನ್ಸ್ ಎಂದೆಲ್ಲಾ ಹೊಟ್ತೆತುಂಬಾ ತಿಂದೆವು. ಆಗತಾನೇ ದೊರೆತ ಸಿಗ್ನಲ್ ಭಾಗ್ಯದಿಂದ ಮನೆಗೆ ಫೋನಾಯಿಸಿ ನಮ್ಮ ಕ್ಷೇಮ ಸಮಾಚಾರ ತಿಳಿಸಿದೆವು.

ಹೊಟ್ಟೆ ಗಟ್ಟಿಯಾದ ಖುಶಿಯೋ ಏನೋ ಕಾಲುಗಳು ತುಸು ವೇಗವಾಗಿಯೇ ತುಳಿಯಲಾರಂಭಿಸಿದವು. ಬಿಸಿಲು ನಿಧಾನವಾಗಿ ಏರಲಾರಂಭಿಸಿತ್ತು. ರಸ್ತೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗತೊಡಗಿತು. ಬಜಗೋಳಿ, ಕಾರ್ಕಳ, ನಿಟ್ಟೆ ದಾಟಿ ಬೆಳ್ಮಣ್ ತಲುಪಿದಾಗ ಎಲ್ಲರಿಗೂ ಬಾಯಾರಿಕೆ. ಕಬ್ಬಿನ ಹಾಲು ಕುಡಿದು ದಾಹ ತೀರಿಸಕೊಂಡು ಮುಂದೆ ಸಾಗಿದೆವು. ನಡುನಡುವೆ ನಮ್ಮೀ ಯಾನದ ನಿರ್ದೇಶಕರಾದ ಮೀಸೆಮಾಮ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಪಡುಬಿದ್ರೆ ತಲುಪಿದಾಗ ನನ್ನ ಮತ್ತು ಚಿನ್ಮಯನ ನೀರಿನ ಖಜಾನೆ ಬರಿದಾಗತೊಡಗಿತ್ತು. ನೀರು ತುಂಬಿಸಿಕೊಂಡು ಹೆಜಮಾಡಿಯ ಚೆಕ್ ಪೋಸ್ಟ್ ಬಳಿ ಬಂದಾಗ ಮೀಸೆ ಮಾಮ ಮತ್ತು ವೇಣುವಿನೋದ ನಮ್ಮ ದಾರಿ ಕಾಯುತ್ತಿದ್ದರು. ಕುದುರೆಮುಖದಿ ಕೊಂಡು ತಂದ ಕಡಲೆಮಿಠಾಯಿ (ಚಿಕ್ಕಿ) ತಿಂದು ಮುಂದುವರೆದಾಗ ಗಂಟೆ ನಡು ಮಧ್ಯಾಹ್ನ ೧೨.
  ನೆಕ್ಸ್ಟ್ ಸ್ಟಾಪ್ ಸುರತ್ಕಲ್ ಎಂದು ನಿರ್ಧರಿಸಿದೆವು. ಮರಳಿ ಮನೆಗೆ ಎಂಬ ಖುಶಿಯಲ್ಲಿ ವೇಗವಾಗಿ ಸೈಕಲ್ ತುಳಿಯಲು ಪ್ರಾರಂಭಿಸಿದೆವು. ಬಿಸಿಲಿನ ತಾಪ ಹೆಚ್ಚು ಹೊತ್ತು ನಮಗೂ ಬೇಡವಾಗಿತ್ತು. ಸುರತ್ಕಲ್ ನಲ್ಲಿ ವೇಣುವನ್ನು ಬೀಳ್ಕೊಂಡು ಕೊಟ್ಟಾರ ಚೌಕಿಯಾಗಿ ಮನೆ ತಲುಪಿದಾಗ ಸುಮಾರು ೧.೩೦.
 ನನಗಂತೂ ಈ ಯಾನ ತುಂಬಾ ಹೊಸವಿಚಾರ ಕಲಿಸಿ ಕೊಟ್ಟಿತು. ಗಿಯರ್ ಸಿಸ್ಟಂ ಅನ್ನು ಸಮರ್ಥವಾಗಿ ಬಳಸುವ ಕಲೆ ಅರ್ಥವಾಯಿತು. ಇನ್ನು ಸೈಕ್ಲಿಂಗ್ ಗೆಂದು ಕೊಂಡ ಹೊಸ ಉಡುಪು ಸವಾರಿಯನ್ನು ಸುಲಭ ಗೊಳಿಸುವುದು ತಿಳಿಯಿತು. ದೂರಸವಾರಿ ಮಾಡುವಾಗ ದೇಹಕ್ಕೆ ನೀರಿನ ಪೂರೈಕೆಯ ಮಹತ್ವ ಅರ್ಥವಾಯಿತು. ಜೊತೆಗೆ ಗುರಿ ಖಂಡಿತಾ ತಲುಪುತ್ತೇನೆ ಎಂಬ ಮಾನಸಿಕ ದ್ರುಢತೆ ಸವಾರಿಯನ್ನು ಆರಾಮ ಗೊಳಿಸುತ್ತದೆ.
  ತಮ್ಮ ೬೦ರ ಹರೆಯದಲ್ಲೂ, ೩೦ರ ಹರೆಯದ ನಮ್ಮನ್ನೂ ನಾಚಿಸುವಂತೆ ಮೀಸೆಮಾಮ ಅಶೋಕವರ್ಧನರು ಒಂದೇಸಮನೆ ಸೈಕಲ್ ತುಳಿದ ಪರಿ ಮಾತ್ರ ಅವರ್ಣನೀಯ. ಅವರಂತಹಾ ಹಿರಿಯ ನಮ್ಮ ಜೊತೆಗೆ ಇದ್ದುದು ನಮ್ಮ ಉತ್ಸಾಹ ಇನ್ನೂ ಹೆಚ್ಚು ಮಾಡಿತ್ತು. ಅವರೊಂದಿಗೆ ಇನ್ನಷ್ಟು ಸಹವಾಸ ಸಿಗಲಿ, ಕಲಿಕೆಗೆ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ. ಜೊತೆಗೆ ಮಿತ್ರರಾದ ವೇಣು ವಿನೋದ ಮತ್ತು ಚಿನ್ಮಯರಿಗೂ ಧನ್ಯವಾದ.
ಇಂತಿ ಸಂಕ್ರಾಂತಿ ಸೈಕಲ್ ಯಾನ

ಚಿತ್ರ ಕ್ರುಪೆ ವೇಣುವಿನೋದ ಹಾಗೂ ಚಿನ್ಮಯ ದೇಲಂಪಾಡಿ

Tuesday, 19 January 2016

ಹೋಗುವೆನು ನಾ, ಹೋಗುವೆನು ನಾ,
ನನ್ನ ಒಲುಮೆಯ ಗೂಡಿಗೆ,
ಮಲೆಯ ನಾಡಿಗೆ, ಮಳೆಯ ಬೀಡಿಗೆ,
ಸಿರಿಯ ಚೆಲುವಿನ ರೂಡಿಗೆ
    ಎಂಬ ಕವಿ ಕುವೆಂಪು ಸಾಲು ಮತ್ತು ಮಲೆನಾಡು, ಆ ಕಾಡು ತುಂಬಾ ದಿನಗಳಿಂದ ಕಾಡುತ್ತಿತ್ತು, ನೆನಪಾಗುತ್ತಿತ್ತು. ಸೈಕಲ್ ಕ್ಲಬ್ ನ ಕಾರ್ಯಕ್ರಮದಲ್ಲಿ ಸಿಕ್ಕಿದ ಮೀಸೆ ಮಾಮ ಅಶೋಕವರ್ಧನರು ಕುದುರೆಮುಖಕ್ಕೆ ಸೈಕಲ್ ಸವಾರಿಯ ಆಹ್ವಾನ ಕೊಟ್ಟರು. ಅದೇ ದಿನ ಹೊಸಾ ಸೈಕಲ್ ಖರೀದಿ ಮಾಡಲು ಮೊದಲೇ ನಿರ್ಧಾರ ಮಾಡಿದ್ದ ನಾನು ಕಣ್ಣುಮುಚ್ಚಿ ಒಪ್ಪಿಕೊಂಡೆ. ನನ್ನ ಹೊಸಾ ಮೆರೀಡಾ ಕ್ರಾಸ್ ವೇ ೨೦ ಕೊಂಡು ವಿಟ್ಲಕ್ಕೆ ಸವಾರಿ ಹೊರಟೆ. ಪ್ರತಿ ದಿನ ಅಭ್ಯಾಸ ಶುರು ಮಾಡಿಕೊಂಡೆ. ಮರಳಿ ಮಂಗಳೂರಿಗೆ ಸೈಕಲ್ ಏರಿ ಬಂದು ಮಕರ ಸಂಕ್ರಾಂತಿ ಸೈಕಲ್ ಯಾನಕ್ಕೆ ತಯಾರಾದೆ.
  ಹಿಂದೆ ನಾನು ಕಳಸಾ ದಿಂದ ಮಂಗಳೂರಿಗೆ ಏಕಾಂಗಿಯಾಗಿ ಸೈಕಲ್ ಏರಿ ಬಂದಾಗ ಬೆಂಬಲವಾಗಿದ್ದ ಅಮ್ಮನ ಜೊತೆ ನನ್ನಾಕೆ ಅಂದರೆ ನನ್ನ ಅರ್ಧಾಂಗಿಯ ಬೆಂಬಲವೂ ಇದೀಗ ನನ್ನ ಜೊತೆಗಿತ್ತು. ರಾತ್ರಿ ೧೨ಕ್ಕೆ ಮಲಗಿದ ನನಗೆ ಎಲರಾಂ ೪.೩೦ ಗೆ ಎಬ್ಬಿಸಿದಾಗಲೇ ಎಚ್ಚರ. ಜರ್ಕೀನು, ಹೆಲ್ಮೇಟು, ಶೂ, ಗ್ಲೌಸ್ ತೊಟ್ಟು, ಬೆನ್ನಿಗೊಂದು ಬ್ಯಾಗು ಏರಿಸಿ ಹೊರಟೆ.
 ಹೊಸದಾಗಿ ಪರಿಚಯವಾಗಿದ್ದ ಗೆಳೆಯ ಚಿನ್ಮಯ ದೇಲಂಪಾಡಿ ಮನೆಯ ಬಳಿ ಜೊತೆಯಾದರು. ಕೊಟ್ಟಾರ ಚೌಕಿ ಮೇಲ್ಸೇತುವೆ ದಾಟಿ ಮೀಸೆ ಮಾಮನಿಗಾಗಿ ಕಾದೆವು. ಸರಿಯಾಗಿ ೫.೧೫ಕ್ಕೆ ಅಸಾಮಿ ಹಾಜರ್. ಉಭಯಕುಶಲೋಪರಿ ಸಾಂಪ್ರತ ಮುಗಿಸಿ ಸುರತ್ಕಲ್ ಕಡೆಗೆ ಸವಾರಿ ಹೊರಟಿತು. ೫.೪೫ ಕ್ಕೆ ಸುರತ್ಕಲ್ ತಲುಪಿ ಸದಾನಂದವಾಗಿರುವ ಮೀಸೆಮಾಮ ಎಲ್ಲಿ ವೇಣು ನಾಕಾಣೆ ಎಂದು ವಿನೋದವಾಗಿ ಅಬ್ಬರಿಸಿದರು. ಆಗಲೇ ಮಿನುಗು ಬೆಳಕಿನ ದೀಪದೊಂದಿಗೆ ಪತ್ರಕರ್ತ ವೇಣುವಿನೋದರ ಪ್ರವೇಶವಾಯಿತು.
  ಹೋ.... ಎಲ್ರದ್ದೂ ಮೆರಿಡಾ ಸೈಕಲ್ ಎಂದ ಚಿನ್ಮಯ, ಹೌದಲ್ವಾ ಎಂದು ಎಲ್ಲ್ರೂ ಉದ್ಗರಿಸಿ ತಡಮಾಡದೆ ಮುಂದುವರಿದೆವು. ಕೋಲ್ನಾಡು ತಲುಪಿದ ನಾನು ಮತ್ತು ಮೀಸೆಮಾಮ ಏನು ಉಳಿದ ಇಬ್ರೂ ಹಿಂದೆ ಬಿದ್ರಾ.. ರೈಡ್ ಮಾಡುವಾಗ ಮಾತಾಡ್ತಾ ನಿಧಾನಿಸಿದ್ರೇ ಎಂದು ನಿಲ್ಲಿಸಿ ಹಿಂದೆ ತಿರುಗಿ ಕತ್ತು ಉದ್ದ ಮಾಡತೊಡಗಿದೆವು. ನಮ್ಮ ಸೈಕಲ್ ಯಾನದ ವಿಷಯ ತಿಳಿದ ಅಭಿಜಿತ್ ಭಟ್ ನಮಗೆ ಶುಭಕೋರಲೆಂದು ಬೈಕ್ ಏರಿ ಬಂದು, ನಮಗಾಗಿ ಕಿತ್ತಳೆ ಹೊತ್ತು ತಂದು ನಮ್ಮ ಉತ್ಸಾಹ ಹೆಚ್ಚು ಮಾಡಿದ್ದ.
  ಪಡುಬಿದ್ರೆ ತಲುಪಿದ ನಾವು ಅಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಹಳೇಯ ಹೋಟೆಲ್ ನಲ್ಲಿ ಬಿಸಿಬಿಸಿ ಉಪ್ಪಿಟ್ಟು ಕಾಪಿ ಕುಡಿಯುವಾಗ ನನಗೆ ಕಳಸಾದಲ್ಲಿ ನಿತ್ಯ ನಮಗೆ ಪ್ರೀತಿಯಿಂದ ಊಟ ತಿಂಡಿ ನೀಡುತ್ತಿದ್ದ ಹೋಟೆಲ್ ಮೀನಾಕ್ಷಿ ಭವನದ ಗಣೇಶ ಭಟ್ಟರು ಮತ್ತವರ ಶ್ರೀಮತಿ ನೆನಪಾದರು.  ಸರಿಯಾಗಿ ೭ಗಂಟೆಗೆ ಪಡುಬಿದ್ರೆಯಿಂದ ಹೊರಟ ನಾವು ನಂದಿಕೂರು, ಅಡ್ವೆ, ಕಾಂಜರಕಟ್ಟೆ, ಸಾಂತೂರುಕೊಪ್ಪ, ಬೆಳ್ಮಣ್, ನಿಟ್ಟೆ, ಧೂಪದಕಟ್ಟೆ, ಕಾರ್ಕಳ ಮಾರ್ಗವಾಗಿ ಬಜಗೋಳಿ ಕಡೆಗೆ ನಮ್ಮ ಪಯಣ ಸಾಗಿತ್ತು. ನಿಧಾನವಾಗಿ ಸೂರ್ಯ ಮೂಡಣ ದಿಕ್ಕಿನಿಂದ ದರುಶನ ನೀಡಲು ಶುರುಮಾಡಿದ್ದ. ಹೊಸತಾಗಿ ನಿರ್ಮಾಣವಾಗಿದ್ದ ರಸ್ತೆ ನಮ್ಮ ಉತ್ಸಾಹವನ್ನು ಇನ್ನೂ ಹೆಚ್ಚಿಸಿದ್ದವು. ನಡುನಡುವೆ ದಣಿವಾದಗಲೆಲ್ಲ ನಿಲ್ಲಿಸಿ, ನೀರು ಕುಡಿದು, ಫೋಟೋ ಕ್ಲಿಕ್ಕಿಸಿ, ನಮ್ಮ ಪ್ರಯಾಣ ಸುಮಾರು ೮.೪೫ ಕ್ಕೆ ಬಜಗೊಳಿ ತಲುಪಿತು. ಹೋಟೆಲ್ ಭುವನೇಶ್ವರಿಯಲ್ಲಿ ನೀರ್ ದೋಸೆ, ಇಡ್ಲಿ, ಬನ್ಸ್, ಜಿಲೇಬಿ ಗಳಿಂದ ಫುಲ್ ಟ್ಯಾಂಕ್ ಮಾಡಿಕೊಂಡು ನಮ್ಮ ಸವಾರಿ ಮುಂದೆ ಸಾಗಿತು.

  
  ಬೆಳಗ್ಗೆಯಿಂದ ಸುಮಾರು ೭೦ ಕಿ.ಮೀ ಸೈಕಲ್ ಸವಾರಿ ಮುಗಿಸಿ ಮಾಳ ಘಾಟಿ ಪ್ರಾರಂಭ ಎಂಬ ಫಲಕದ ಮುಂದೆ ಬಂದು ನಿಂತಾಗ ಸುಮಾರು ೧೦ ಗಂಟೆ. ಅಲ್ಲಿದ ಮುಂದೆ ಸುಮಾರು ೩೫ ಕಿ.ಮೀ ದೂರದ ಕುದುರೆಮುಖ ಪಟ್ಟಣ ನಮ್ಮ ಮುಂದಿನ ಗುರಿ. ನಡುವೆ ಜಗತ್ತಿನಲ್ಲೇ ಅತೀ ಅಪರೂಪದ ಶೋಲಾ ಕಾಡಿನ ದಟ್ಟ ಅರಣ್ಯ. ಕುದುರೆಮುಖ ಪಟ್ಟಣವನ್ನು ಬಂದರು ನಗರಿ ಮಂಗಳೂರಿಗೆ ಸಂಪರ್ಕಿಸಲೆಂದೇ ೧೯೭೦ ರ ದಶಕದಲ್ಲಿ ಮದ್ರಾಸ್ ಇನ್ಫೆಂಟ್ರಿ ನಿರ್ಮಿಸಿದ ದಾರಿ ಅದು. ಸುಮಾರು ೧೦೦೦ ಮೀಟರ್ ಎತ್ತರಕ್ಕೆ ಏರಲು ೧೮ ಕಿ.ಮೀ ಗಳ ನಿರಂತರ ಏರುಹಾದಿ ತುಳಿಯಬೇಕಿತ್ತು. ಮೊದಲ ೬ ಕಿ.ಮೀ ಬಲು ಉತ್ಸಾಹದಿಂದಲೇ ಸೈಕಲ್ ತುಳಿದ ನನಗೆ ಮುಂದಿನದಾರಿ ಕಷ್ಟ ಎನಿಸತೊಡಗಿತು. ಹೊಸ ಸೈಕಲಿನ ಗಿಯರ್ ಗಳನ್ನು ಬಳಸಿದರೂ, ಸೀಟು ಬಿಟ್ಟು ನಿಂತು ತುಳಿಯಲು ಪ್ರಯತ್ನಿಸಿದರೂ ದಾರಿ ಮುಗಿಯುತ್ತಿರಲಿಲ್ಲ. ಕೆಲವೊಮ್ಮೆ ನಡೆದೇ ಉಳಿದವರ ಲಯಕ್ಕೆ ಸೇರಿದೆ.
  ಓಟೆ ಹಳ್ಳ, ಡ್ರಾಯ್ ಹಳ್ಳ, ನಡು ಹಳ್ಳ, ಬ್ರಾವೊ ಮುಂತಾದ ಹಲವಾರು ಹೆಸರಿನ ಸೇತುವೆಗಳನ್ನು ಸೇತುವೆಗಳನ್ನು ದಾಟುವಾಗಲೂ ನಿಲ್ಲಿಸಿ, ದಣಿವಾರಿಸಿಕೊಂಡು ಸುತ್ತಲೂ ನೋಡಿ ಮುಂದುವರೆಯುತ್ತಿದ್ದೆವು. ಹಲವಾರು ಕಡೆ ನಮಗೆ ಕಂಡದ್ದು ಮೂಟೆಗಳಲ್ಲಿ ತುಂಬಿ ತಂದು ಕಸವನ್ನು ಅಲ್ಲಿ ಹರಿವ ನೀರ ಧಾರೆಗೆ ಎಸೆದ ಭೀಭತ್ಸ ದೃಶ್ಯ. ದಾರಿಯ ಎರಡೂಕಡೆ ಎಸೆಯಲಾದ ಪ್ಲಾಸ್ಟಿಕ್ ಬಾಟ್ಲಿಗಳು. ಪ್ರತಿವರ್ಷ ಪರಿಸರ ಪ್ರಿಯರು ಹೆಕ್ಕಿ ತೆಗೆದರೂ, ಅಲ್ಲಲ್ಲಿ ಸೂಚನೆ ಹಾಕಿದರೂ ಕಸ ಕಡಿಮೆ ಆಗದಿರುವುದು ಶೋಚನೀಯ.
  ದ.ಕ.ಗಡಿ ಅಂದರೆ ಎಸ್.ಕೆ.ಬಾರ್ಡರ್ ದಾಟಿ ವಿಶಾಲವಾದ ತೆರೆದ ಪ್ರದೇಶ ಸಿಗುತ್ತದೆ. ಅಲ್ಲಿ ನಿಂತು ದಣಿವಾರಿಸುತ್ತಿರುವಾಗ ಅಚಾನಕ್ ನಮ್ಮ ಪತ್ರಕರ್ತ ಮಿತ್ರ ವೇಣು ವಿನೋದರ ಮುಂದಿನ ಟಯರ್ ಇದ್ದಕ್ಕಿದ್ದಂತೇ ಠುಸ್ ಎಂದಿತು. ಇಂತಹ ಪರಿಸ್ತಿತಿಗೆಂದೇ ಚಿನ್ಮಯ ತಂದಿದ್ದ ಟ್ಯೂಬ್ ಆಗ ಉಪಯೋಗಕ್ಕೆ ಬಂತು. ಟ್ಯೂಬ್ ಬದಲಾಯಿಸಿ, ಗಾಳಿ ತುಂಬಿಸಿ, ಪಯಣ ಮುಂದೆ ಸಾಗಿತು. ನಡುವೆ ಆಮೆ ಮತ್ತು ಮೊಲದ ಕಥೆ ನೆನಪಾಗದೇ ಇರಲಿಲ್ಲ.
  ೧೮ ಕಿ.ಮೀ ಒಂದೇಸಮ ಏರಿದ ನಾವು ತಲುಪಿದ್ದು ತುಂಗಾ ಮತ್ತು ಭದ್ರಾ ನದಿಗಳ  ಉಗಮ  ಸ್ಥಾನವಾದ ಗಂಗಾಮೂಲ ವನ್ನು. ಇನ್ನು ಮುಂದಕ್ಕೆ ಎಳಿಜಾರು ಎಂದಾಗ ಎಲ್ಲರ ಮೊಗದಲ್ಲೂ ಅಬ್ಬಾ ಬಚಾವ್ ಎಂಬ ಭಾವ ಮೂಡಿತ್ತು, ಏಕೆಂದರೆ ಎಲ್ಲರ ಬಳಿ ಇದ್ದ ತಿಂಡಿಗಳೆಲ್ಲ ಖಾಲಿಯಾಗಿದ್ದವು. ಎಲ್ಲರ ಹೊಟ್ಟೆ ತಾಳ ಹಾಕುತ್ತಿತ್ತು. ಒಮ್ಮೆ ಹೊಟ್ಟೆ ತುಂಬಾ ತಿಂದರೆ ಸಾಕು ಎಂಬಷ್ಟು ಹಸಿವು ಕಾಡುತ್ತಿತ್ತು. ಒಳಗಿದ್ದ ಶಕ್ತಿಯನ್ನೆಲ್ಲಾ ಬಳಸಿ ಅಂತೂ ಕುದುರೆಮುಖ ಪಟ್ಟಣ ತಲುಪಿದೆವು.
  ಮಂಗಳೂರಿನಿಂದ ಹೊರಟು ೮ ತಾಸುಗಳ ಸೈಕಲ್ ಸವಾರಿ ಮುಗಿಸಿ, ಕುದುರೆಮುಖ ಪಟ್ಟಣದ ಸಹ್ಯಾದ್ರಿ ಭವನ ತಲುಪಿದಾಗ ೨ಗಂಟೆ ೩೦ನಿಮಿಷ. ಮುಕ್ಕಾಲು ಗಂಟೆಯ ದೀರ್ಘ ಕಾಯುವಿಕೆಯ ನಂತರ ಬಿಸಿಬಿಸಿ ಅನ್ನ, ಸಾರು, ಸಾಂಬಾರು, ಹಪ್ಪಳ, ಪಲ್ಯ, ಮೊಸರು ಸಿಕ್ಕಾಗ ನಮಗೆ ಹಬ್ಬದೂಟ ಸಿಕ್ಕ ಹಾಗಾಗಿತ್ತು.
ಅದೇ ದಿನ ಹಿಂದಿರುಗುವ ಪ್ಲಾನ್ ಮಾಡಿ ಬಂದ ನಮಗೆ ಹಿಂದೆ ಹೋಗುವುದು ಅಸಾಧ್ಯ ಎಂಬಷ್ಟು ಸುಸ್ತಾಗಿತ್ತು. ಅಲ್ಲೇ ರೂಮ್ ಪಡೆದು ಪವಡಿಸುವ ಯೋಚನೆಗೆ ಎಲ್ಲರೂ ಸೈ ಎಂದರು. ನಮ್ಮ ನಮ್ಮ ಜೋಬುಗಳನ್ನು ತಡಕಾಡಿದಾಗ ನಮ್ಮ ಬಳಿ ವಿಟಾಮಿನ್ ಎಂ (ಅಂದರೆ ಹಣ) ಕೊರತೆ ಇರುವುದು ಗೊತ್ತಾಯಿತು. ಕುದುರೆಮುಖ ಪಟ್ಟಣದಲ್ಲಿ ಯಾವುದೇ ಎ.ಟಿ.ಎಂ ಇರಲಿಲ್ಲ. ಕೊನೆಗೊಂದು ಉಪಾಯ ಹೊಳೆದು ಅರಣ್ಯ ಇಲಾಖೆಯ ಭಗವತೀ ನಿಸರ್ಗಧಾಮದಲ್ಲಿ ಡಾರ್ಮೆಟ್ರಿ ರೂಮ್ ಪಡೆದೆವು.
  ಮತ್ತೆ ೧೦ಕಿ.ಮೀ ಸೈಕಲ್ ತುಳಿದು, ದಾರಿಮಧ್ಯೆ ಲಕ್ಯಾ ಅಣೆಕಟ್ಟು ಕಂಡು, ಸುಮಾರು ೬.೩೦ಕ್ಕೆ  ನಿಸರ್ಗ ಧಾಮ ತಲುಪಿದೆವು. ಸಂಜೆಯ ಚಹಾ ಕುಡಿದು, ಸ್ನಾನ ಮಾಡಿ ಹಗುರಾಗಿ ಮತ್ತದೇ ಬಟ್ಟೆ ಧರಿಸಿ (ಬೇರೆ ಬಟ್ಟೆ ಇಲ್ಲದ ಕಾರಣ) ರಾತ್ರಿಯ ನಿದ್ರೆಗೆ ಜಾರಿದೆವು. ತಂಪಾದ ವಾತಾವರಣ, ಒಳ್ಳೆ ಊಟ, ದಣಿವು ಸೇರಿ ನಿದ್ರೆ ಬಲುಬೇಗ ಕಣ್ಣು ಹತ್ತಿತ್ತು. 
photo credits Chinmaya Delampady

ಇಂತೀ ಸಂಕ್ರಾಂತಿ ಸೈಕಲ್ ಯಾನ ಭಾಗ ೧ 

Wednesday, 12 February 2014