Tuesday 5 March 2024

 ಪಯಣ ಬೆಂಗಳೂರು ಈ ತಂಡ ಸಮಾನತೆಯೆಡೆಗೆ ಎಂಬ ಶೀರ್ಷಿಕೆಯಲ್ಲಿ ಅಭಿನಯಿಸಿದ ನಾಟಕ ತಲ್ಕಿ. ಈ ನಾಟಕದ 9ನೇ ಪ್ರಯೋಗ ಇಂದು ದಿನಾಂಕ 05-03-2024 ಮಂಗಳವಾರ ಸಂಜೆ ಮಂಗಳೂರಿನ ಸಂತ ಅಲೋಷಿಯಸ್‌ ಕಾಲೇಜಿನಲ್ಲಿ ಪ್ರದರ್ಶನಗೊಂಡಿತು. ಆಯನ ನಾಟಕದ ಮನೆ ಆಯೋಜಿಸಿದ್ದ ಎರಡುದಿನದ ನಾಟಕೋತ್ಸವದಲ್ಲಿ ಪ್ರದರ್ಶನ ಗೊಂಡ ಈ ನಾಟಕದ ಎಲ್ಲ ಪಾತ್ರಧಾರಿಗಳೂ ತೃತೀಯಲಿಂಗಿಗಳೇ. ಅದೂ 55 ವರ್ಷ ದಾಟಿದವರು. ಇದು ಯಾವುದೇ ಕಥೆಯನ್ನು ಆಧರಿಸಿದ ನಾಟಕವಾಗಿರದೆ ಅವರ ಬದುಕಿನ ಕಥೆಯನ್ನೇ, ಅವರು ಬಾಲ್ಯದಲ್ಲಿ ಕಂಡ ಕನಸುಗಳನ್ನೇ ನಾಟಕವಾಗಿಸಿದ ನಾಟಕ. ಅವರ ಬದುಕಿನ ತೊಳಲಾಟಗಳು, ಅವರೊಳಗೆ ಒಬ್ಬರು ಇನ್ನೊಬ್ಬರನ್ನು ಹೇಗೆ ಸಂಬೋಧಿಸುತ್ತಾರೆ, ಅವರ ಬದುಕಿನಲ್ಲಿರುವ ಆಚಾರ ವಿಚಾರಗಳನ್ನು, ಅವರ ಪ್ರೀತಿ, ಪ್ರೇಮ, ನೋವು, ನಲಿವು, ಬದುಕಬೇಕೆಂಬ ಆಸೆ, ಅವಕ ಕುಟುಂಬ ಅವರನ್ನು ನಡೆದಿಕೊಂಡ ರೀತಿ ಇದೆಲ್ಲವನ್ನೂ ಒಂದು ಕಥೆಯಾಗಿ ಹೇಳಿಕೊಳ್ಳುತ್ತಾ ಸಾಗುತ್ತದೆ. 55 ವರ್ಷ ದಾಟಿದ ಈ ಹಿರಿಯ ಜೀವಗಳು ತಮ್ಮ ಕಥೆ ಹೇಳುತ್ತಿದ್ದರೆ ನಮ್ಮದೇ ಮನೆಯ ಯಾರೋ ಹಿರಿಯರು ತಮ್ಮ ನೆನಪುಗಳ ಬುತ್ತಿಯನ್ನು ನಮ್ಮಮುಂದೆ ತೆರೆದಿಟ್ಟಂತೆ ನಾಟಕ ಬಹಳ ಆಪ್ತವಾಗಿತ್ತು. ಕೊನೆಗೆ ಅವರು ತಮ್ಮ ಪರಿಚಯ ಮಾಡಿಕೊಂಡು ಪ್ರೇಕ್ಷಕರ ನಡುವೆ ಇಳಿದು ಬಂದಾಗ ಅವರ ಕೈಕುಲುಕಿ ಶುಭಾಷಯ ಹೇಳದೇ ಇರಲು ಸಾಧ್ಯವಾಗಲಿಲ್ಲ. ತೃತೀಯ ಲಿಂಗಿಗಳಿಗೂ ಎಲ್ಲ ಕ್ಷೇತ್ರಗಳಾದ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಿಗಬೇಕಾದ ಸಮಾನ ಅವಕಾಶಗಳ ಪ್ರಾಮುಖ್ಯತೆ ಏನು ಎಂಬುದು ನನಗೂ ಒಂದಿಷ್ಟು ಸ್ಪಷ್ಟವಾಗತೊಡಗಿತು. ಹನಿ ಎಂಬ ಹೆಸರಿನ ತೃತೀಯಲಿಂಗಿಯೊಬ್ಬರು ನನ್ನ ಪಕ್ಕದಲೇ ಕುಳಿತು ನಾಟಕ ನೋಡಿದರು. ಅವರ ಜೊತೆ ಕುಳಿತು ನಾಟಕ ನೋಡುವ ಅನುಭವವೂ ವಿಶಿಶ್ಟವಾಗಿತ್ತು. ಸಮಾಜದಲ್ಲಿ ನಾವೆಲ್ಲರೂ ಎಲ್ಲರನ್ನೂ ಸಮಾನವಾಗಿ ಕಾಣುವುದೇ ಮನುಷ್ಯತ್ವ ಅಲ್ಲವೇ. ಆಗಲೇ ಇಷ್ಟೊಂದು  ನಾಗರೀಕ ಮಾನವ ಸಮಾಜವಾಗಿ ನಾವು ಮುಂದುವರೆದುದಕ್ಕೆ ಒಂದು ಅರ್ಥಬರುವುದು







































No comments:

Post a Comment