ಜಂಗಮ ಕಲೆಕ್ಟಿವ್, ಬೆಂಗಳೂರು ಅಭಿನಯಿಸಿದ, ಕೆ.ಪಿ.ಲಕ್ಷ್ಮಣ್ ಪರಿಕಲ್ಪನೆ ಮತ್ತು ವಿನ್ಯಾಸ ಮಾಡಿರುವ, ಚಂದ್ರಶೇಖರ್ ಕೆ ನಿರ್ದೇಶನದ ನಾಟಕ ಪಂಚಮ ಪದ ಇಂದು ದಿನಾಂಕ 04-03-2024 ಸೋಮವಾರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್. ಐ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಆಯನ ನಾಟಕದ ಮನೆ ಮತ್ತು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಈ ಪ್ರದರ್ಶನದ ಆಯೋಜನೆ ಮಾಡಿದ್ದರು. ಹೋರಾಟದ ಹಾಡುಗಳ ಹುಟ್ಟು ಮತ್ತು ಸಂದರ್ಭಗಳನ್ನು ನೆನಪು ಮಾಡಿಕೊಳ್ಳುತ್ತಾ, ಕೋಟಿಗಾನಹಳ್ಳಿ ರಾಮಯ್ಯ, ಕವಿ ಸಿದ್ಧಲಿಂಗಯ್ಯ ಮೊದಲಾದವರ ಬದುಕಿನ ಜೊತೆಜೊತೆಗೆ ಈ ಹಾಡುಗಳು ಹೇಗೆ ಹುಟ್ಟಿದವು, ಎಂಬುದನ್ನು ಕಟ್ಟಿಕೊಡುತ್ತಲೇ ಸಾಗಿತು. ಬಾಲ್ಯದಲ್ಲಿ ಅಪ್ಪ ಆಗಾಗ ಗುನುಗುತ್ತಿದ್ದ ʼನೆನ್ನೆದಿನಾ ನನ್ನಜನಾ ಬೆಟ್ಟದಂತೆ ಬಂದರುʼ ಹಾಡು ಹುಟ್ಟಿದ ಸಂದರ್ಭ ಮತ್ತು ಅದರ ಹಿಂದಿರುವ ನೋವು ಮತ್ತು ಆಕ್ರೋಷಗಳ ಹಿನ್ನೆಲೆ ತಿಳಿದು ಒಮ್ಮೆ ಮನಸ್ಸು ಅಲುಗಾಡಿಹೋಯಿತು.
Monday, 4 March 2024
Saturday, 2 March 2024
೦೨-೦೩-೨೦೨೪ ಶನಿವಾರ ಸಂಜೆ ಸಮುದಾಯ ಮಂಗಳೂರು ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ , ಸಮುದಾಯ ಬೆಂಗಳೂರು ತಂಡ ಅಭಿನಯಿಸಿದ ನಾಟಕ "ಕರಿಯ ದೇವರ ಹುಡುಕಿ" ಸುಂದರವಾಗಿ ಮೂಡಿ ಬಂತು. ಮೂಲ ಪ್ರೊ. ಜಿ ಶಂಕರ ಪಿಳ್ಳೈ ರಚಿಸಿದ ಈ ನಾಟಕವನ್ನು ಡಾ. ನಾ ದಾಮೋದರ ಶೆಟ್ಟಿ ಕನ್ನಡ ಬಾಷೆಗೆ ಅನುವಾದಿಸಿದ್ದಾರೆ. ನಿರಂಜನ ಖಾಲಿಕೊಡ ನಿರ್ದೇಶಿಸಿದ ಈ ನಾಟಕ ತನ್ನ ಕಥೆಯ ಗಟ್ಟಿತನದಿಂದಾಗಿ ಮನಸ್ಸಿನಲ್ಲಿ ಉಳಿಯುವಂತಾಯಿತು. ಮಾನವನ ಹುಟ್ಟು, ನಾಗರೀಕತೆಯ ಬೆಳವಣಿಗೆ, ವಲಸೆ, ನಂಬಿಕೆ, ಹುಡುಕಾಟ, ತನ್ನದೇ ಮೇಲು ಎಂಬ ದರ್ಪ, ಆಚಾರ ವಿಚಾರಗಳ ಹುಟ್ಟು, ನಂಬಿಕೆಗಳಿಗಾಗಿ ಮೂಕ ಪ್ರಾಣಿಗಳ ಬಲಿ, ಕೊನೆಗೆ ಬಲಿಯಾದ ಪ್ರಾಣಿಯೇ ದೇವರಾಗುವ ಪರಿ ಬಹಳ ಸೊಗಸಾಗಿತ್ತು. ಒಂದು ಸಂಸ್ಕೃತಿ ಇನ್ನೊಂದರೊಂದಿಗೆ ಸೇರಿ ಹುಟ್ಟುವ ಹೊಸ ಆಚಾರ, ವಿಚಾರ, ನಂಬಿಕೆಗಳು, ನಾವು ಇಂದು ಎಲ್ಲಿಗೆ ಬಂದು ನಿಂತಿದ್ದೇವೆ ನಮ್ಮ ನಂಬಿಕೆ ಮತ್ತು ಆಚರಣೆಗಳ ಮೂಲ ಎಲ್ಲಿ ಎಂಬುದನ್ನು ಮತ್ತೆ ಪ್ರಶ್ನಿಸಿಕೊಳ್ಳುವಂತೆ ಮಾಡಿತು. ವೃತ್ತಾಕಾರದ ಹಲವು ವೃತ್ತಗಳನ್ನು ಬೇರೆಬೇರೆ ರೀತಿಯಾಗಿ ನಾಟಕದ ಕಥೆಗೆ ಪೂರಕವಾಗಿ ಬಳಸಿಕೊಂಡ ರೀತಿ ಬಹಳ ಸೊಗಸಾಗಿತ್ತು. ಹಲವಾರು ಕಡೆ ಅವುಗಳೇ ಕಥೆ ಹೇಳುವಂತಿತ್ತು, ಯುವ ನಟರನ್ನು ಇನ್ನೊಂದಿಷ್ಟು ಉತ್ತಮವಾಗಿ ದುಡಿಸಿಕೊಂಡಿದ್ದರೆ ನಾಟಕದ ಆಶಯ ಇನ್ನೂ ಗಟ್ಟಿಯಾಗಿ ಮೂಡಿಬರುತ್ತಿತ್ತು. ಕಥೆಯ ಗಟ್ಟಿತನದಿಂದಾಗಿ ನಾಟಕ ಮತ್ತೆ ಮೆಲುಕುಹಾಕುವಂತಿತ್ತು..
ಪ್ರದರ್ಶನ ಏರ್ಪಡಿಸಿದ ಎಲ್ಲರಿಗೂ ಧನ್ಯವಾದಗಳು
















