ಹೋಗುವೆನು ನಾ,
ಹೋಗುವೆನು ನಾ,
ನನ್ನ ಒಲುಮೆಯ
ಗೂಡಿಗೆ,
ಮಲೆಯ ನಾಡಿಗೆ,
ಮಳೆಯ ಬೀಡಿಗೆ,
ಸಿರಿಯ ಚೆಲುವಿನ
ರೂಡಿಗೆ
ಎಂಬ ಕವಿ ಕುವೆಂಪು ಸಾಲು ಮತ್ತು ಮಲೆನಾಡು, ಆ ಕಾಡು
ತುಂಬಾ ದಿನಗಳಿಂದ ಕಾಡುತ್ತಿತ್ತು, ನೆನಪಾಗುತ್ತಿತ್ತು. ಸೈಕಲ್ ಕ್ಲಬ್ ನ ಕಾರ್ಯಕ್ರಮದಲ್ಲಿ
ಸಿಕ್ಕಿದ ಮೀಸೆ ಮಾಮ ಅಶೋಕವರ್ಧನರು ಕುದುರೆಮುಖಕ್ಕೆ ಸೈಕಲ್ ಸವಾರಿಯ ಆಹ್ವಾನ ಕೊಟ್ಟರು. ಅದೇ ದಿನ
ಹೊಸಾ ಸೈಕಲ್ ಖರೀದಿ ಮಾಡಲು ಮೊದಲೇ ನಿರ್ಧಾರ ಮಾಡಿದ್ದ ನಾನು ಕಣ್ಣುಮುಚ್ಚಿ ಒಪ್ಪಿಕೊಂಡೆ. ನನ್ನ
ಹೊಸಾ ಮೆರೀಡಾ ಕ್ರಾಸ್ ವೇ ೨೦ ಕೊಂಡು ವಿಟ್ಲಕ್ಕೆ ಸವಾರಿ ಹೊರಟೆ. ಪ್ರತಿ ದಿನ ಅಭ್ಯಾಸ ಶುರು
ಮಾಡಿಕೊಂಡೆ. ಮರಳಿ ಮಂಗಳೂರಿಗೆ ಸೈಕಲ್ ಏರಿ ಬಂದು ಮಕರ ಸಂಕ್ರಾಂತಿ ಸೈಕಲ್ ಯಾನಕ್ಕೆ ತಯಾರಾದೆ.
ಹಿಂದೆ ನಾನು ಕಳಸಾ ದಿಂದ ಮಂಗಳೂರಿಗೆ ಏಕಾಂಗಿಯಾಗಿ
ಸೈಕಲ್ ಏರಿ ಬಂದಾಗ ಬೆಂಬಲವಾಗಿದ್ದ ಅಮ್ಮನ ಜೊತೆ ನನ್ನಾಕೆ ಅಂದರೆ ನನ್ನ ಅರ್ಧಾಂಗಿಯ ಬೆಂಬಲವೂ
ಇದೀಗ ನನ್ನ ಜೊತೆಗಿತ್ತು. ರಾತ್ರಿ ೧೨ಕ್ಕೆ ಮಲಗಿದ ನನಗೆ ಎಲರಾಂ ೪.೩೦ ಗೆ ಎಬ್ಬಿಸಿದಾಗಲೇ
ಎಚ್ಚರ. ಜರ್ಕೀನು, ಹೆಲ್ಮೇಟು, ಶೂ, ಗ್ಲೌಸ್ ತೊಟ್ಟು, ಬೆನ್ನಿಗೊಂದು ಬ್ಯಾಗು ಏರಿಸಿ ಹೊರಟೆ.
ಹೊಸದಾಗಿ ಪರಿಚಯವಾಗಿದ್ದ ಗೆಳೆಯ ಚಿನ್ಮಯ ದೇಲಂಪಾಡಿ
ಮನೆಯ ಬಳಿ ಜೊತೆಯಾದರು. ಕೊಟ್ಟಾರ ಚೌಕಿ ಮೇಲ್ಸೇತುವೆ ದಾಟಿ ಮೀಸೆ ಮಾಮನಿಗಾಗಿ ಕಾದೆವು. ಸರಿಯಾಗಿ
೫.೧೫ಕ್ಕೆ ಅಸಾಮಿ ಹಾಜರ್. ಉಭಯಕುಶಲೋಪರಿ ಸಾಂಪ್ರತ ಮುಗಿಸಿ ಸುರತ್ಕಲ್ ಕಡೆಗೆ ಸವಾರಿ ಹೊರಟಿತು.
೫.೪೫ ಕ್ಕೆ ಸುರತ್ಕಲ್ ತಲುಪಿ ಸದಾನಂದವಾಗಿರುವ ಮೀಸೆಮಾಮ ಎಲ್ಲಿ ವೇಣು ನಾಕಾಣೆ ಎಂದು ವಿನೋದವಾಗಿ
ಅಬ್ಬರಿಸಿದರು. ಆಗಲೇ ಮಿನುಗು ಬೆಳಕಿನ ದೀಪದೊಂದಿಗೆ ಪತ್ರಕರ್ತ ವೇಣುವಿನೋದರ ಪ್ರವೇಶವಾಯಿತು.
ಹೋ.... ಎಲ್ರದ್ದೂ ಮೆರಿಡಾ ಸೈಕಲ್ ಎಂದ ಚಿನ್ಮಯ,
ಹೌದಲ್ವಾ ಎಂದು ಎಲ್ಲ್ರೂ ಉದ್ಗರಿಸಿ ತಡಮಾಡದೆ ಮುಂದುವರಿದೆವು. ಕೋಲ್ನಾಡು ತಲುಪಿದ ನಾನು ಮತ್ತು
ಮೀಸೆಮಾಮ ಏನು ಉಳಿದ ಇಬ್ರೂ ಹಿಂದೆ ಬಿದ್ರಾ.. ರೈಡ್ ಮಾಡುವಾಗ ಮಾತಾಡ್ತಾ ನಿಧಾನಿಸಿದ್ರೇ ಎಂದು
ನಿಲ್ಲಿಸಿ ಹಿಂದೆ ತಿರುಗಿ ಕತ್ತು ಉದ್ದ ಮಾಡತೊಡಗಿದೆವು. ನಮ್ಮ ಸೈಕಲ್ ಯಾನದ ವಿಷಯ ತಿಳಿದ
ಅಭಿಜಿತ್ ಭಟ್ ನಮಗೆ ಶುಭಕೋರಲೆಂದು ಬೈಕ್ ಏರಿ ಬಂದು, ನಮಗಾಗಿ ಕಿತ್ತಳೆ ಹೊತ್ತು ತಂದು ನಮ್ಮ
ಉತ್ಸಾಹ ಹೆಚ್ಚು ಮಾಡಿದ್ದ.
ಪಡುಬಿದ್ರೆ ತಲುಪಿದ ನಾವು ಅಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ
ಬಳಿಯ ಹಳೇಯ ಹೋಟೆಲ್ ನಲ್ಲಿ ಬಿಸಿಬಿಸಿ ಉಪ್ಪಿಟ್ಟು ಕಾಪಿ ಕುಡಿಯುವಾಗ ನನಗೆ ಕಳಸಾದಲ್ಲಿ ನಿತ್ಯ
ನಮಗೆ ಪ್ರೀತಿಯಿಂದ ಊಟ ತಿಂಡಿ ನೀಡುತ್ತಿದ್ದ ಹೋಟೆಲ್ ಮೀನಾಕ್ಷಿ ಭವನದ ಗಣೇಶ ಭಟ್ಟರು ಮತ್ತವರ
ಶ್ರೀಮತಿ ನೆನಪಾದರು.
ಸರಿಯಾಗಿ ೭ಗಂಟೆಗೆ ಪಡುಬಿದ್ರೆಯಿಂದ
ಹೊರಟ ನಾವು ನಂದಿಕೂರು, ಅಡ್ವೆ, ಕಾಂಜರಕಟ್ಟೆ, ಸಾಂತೂರುಕೊಪ್ಪ, ಬೆಳ್ಮಣ್, ನಿಟ್ಟೆ, ಧೂಪದಕಟ್ಟೆ,
ಕಾರ್ಕಳ ಮಾರ್ಗವಾಗಿ ಬಜಗೋಳಿ ಕಡೆಗೆ ನಮ್ಮ ಪಯಣ ಸಾಗಿತ್ತು. ನಿಧಾನವಾಗಿ ಸೂರ್ಯ ಮೂಡಣ ದಿಕ್ಕಿನಿಂದ
ದರುಶನ ನೀಡಲು ಶುರುಮಾಡಿದ್ದ. ಹೊಸತಾಗಿ ನಿರ್ಮಾಣವಾಗಿದ್ದ ರಸ್ತೆ ನಮ್ಮ ಉತ್ಸಾಹವನ್ನು ಇನ್ನೂ ಹೆಚ್ಚಿಸಿದ್ದವು.
ನಡುನಡುವೆ ದಣಿವಾದಗಲೆಲ್ಲ ನಿಲ್ಲಿಸಿ, ನೀರು ಕುಡಿದು, ಫೋಟೋ ಕ್ಲಿಕ್ಕಿಸಿ, ನಮ್ಮ ಪ್ರಯಾಣ ಸುಮಾರು
೮.೪೫ ಕ್ಕೆ ಬಜಗೊಳಿ ತಲುಪಿತು. ಹೋಟೆಲ್ ಭುವನೇಶ್ವರಿಯಲ್ಲಿ ನೀರ್ ದೋಸೆ, ಇಡ್ಲಿ, ಬನ್ಸ್, ಜಿಲೇಬಿ
ಗಳಿಂದ ಫುಲ್ ಟ್ಯಾಂಕ್ ಮಾಡಿಕೊಂಡು ನಮ್ಮ ಸವಾರಿ ಮುಂದೆ ಸಾಗಿತು.
ಬೆಳಗ್ಗೆಯಿಂದ ಸುಮಾರು ೭೦ ಕಿ.ಮೀ ಸೈಕಲ್ ಸವಾರಿ
ಮುಗಿಸಿ ಮಾಳ ಘಾಟಿ ಪ್ರಾರಂಭ ಎಂಬ ಫಲಕದ ಮುಂದೆ ಬಂದು ನಿಂತಾಗ ಸುಮಾರು ೧೦ ಗಂಟೆ. ಅಲ್ಲಿದ ಮುಂದೆ
ಸುಮಾರು ೩೫ ಕಿ.ಮೀ ದೂರದ ಕುದುರೆಮುಖ ಪಟ್ಟಣ ನಮ್ಮ ಮುಂದಿನ ಗುರಿ. ನಡುವೆ ಜಗತ್ತಿನಲ್ಲೇ ಅತೀ ಅಪರೂಪದ
ಶೋಲಾ ಕಾಡಿನ ದಟ್ಟ ಅರಣ್ಯ. ಕುದುರೆಮುಖ ಪಟ್ಟಣವನ್ನು ಬಂದರು ನಗರಿ ಮಂಗಳೂರಿಗೆ ಸಂಪರ್ಕಿಸಲೆಂದೇ ೧೯೭೦
ರ ದಶಕದಲ್ಲಿ ಮದ್ರಾಸ್ ಇನ್ಫೆಂಟ್ರಿ ನಿರ್ಮಿಸಿದ ದಾರಿ ಅದು. ಸುಮಾರು ೧೦೦೦ ಮೀಟರ್ ಎತ್ತರಕ್ಕೆ ಏರಲು
೧೮ ಕಿ.ಮೀ ಗಳ ನಿರಂತರ ಏರುಹಾದಿ ತುಳಿಯಬೇಕಿತ್ತು. ಮೊದಲ ೬ ಕಿ.ಮೀ ಬಲು ಉತ್ಸಾಹದಿಂದಲೇ ಸೈಕಲ್ ತುಳಿದ
ನನಗೆ ಮುಂದಿನದಾರಿ ಕಷ್ಟ ಎನಿಸತೊಡಗಿತು. ಹೊಸ ಸೈಕಲಿನ ಗಿಯರ್ ಗಳನ್ನು ಬಳಸಿದರೂ, ಸೀಟು ಬಿಟ್ಟು ನಿಂತು
ತುಳಿಯಲು ಪ್ರಯತ್ನಿಸಿದರೂ ದಾರಿ ಮುಗಿಯುತ್ತಿರಲಿಲ್ಲ. ಕೆಲವೊಮ್ಮೆ ನಡೆದೇ ಉಳಿದವರ ಲಯಕ್ಕೆ ಸೇರಿದೆ.
ಓಟೆ ಹಳ್ಳ, ಡ್ರಾಯ್ ಹಳ್ಳ, ನಡು ಹಳ್ಳ, ಬ್ರಾವೊ
ಮುಂತಾದ ಹಲವಾರು ಹೆಸರಿನ ಸೇತುವೆಗಳನ್ನು ಸೇತುವೆಗಳನ್ನು ದಾಟುವಾಗಲೂ ನಿಲ್ಲಿಸಿ, ದಣಿವಾರಿಸಿಕೊಂಡು
ಸುತ್ತಲೂ ನೋಡಿ ಮುಂದುವರೆಯುತ್ತಿದ್ದೆವು. ಹಲವಾರು ಕಡೆ ನಮಗೆ ಕಂಡದ್ದು ಮೂಟೆಗಳಲ್ಲಿ ತುಂಬಿ ತಂದು
ಕಸವನ್ನು ಅಲ್ಲಿ ಹರಿವ ನೀರ ಧಾರೆಗೆ ಎಸೆದ ಭೀಭತ್ಸ ದೃಶ್ಯ. ದಾರಿಯ ಎರಡೂಕಡೆ ಎಸೆಯಲಾದ ಪ್ಲಾಸ್ಟಿಕ್
ಬಾಟ್ಲಿಗಳು. ಪ್ರತಿವರ್ಷ ಪರಿಸರ ಪ್ರಿಯರು ಹೆಕ್ಕಿ ತೆಗೆದರೂ, ಅಲ್ಲಲ್ಲಿ ಸೂಚನೆ ಹಾಕಿದರೂ ಕಸ ಕಡಿಮೆ
ಆಗದಿರುವುದು ಶೋಚನೀಯ.
ದ.ಕ.ಗಡಿ ಅಂದರೆ ಎಸ್.ಕೆ.ಬಾರ್ಡರ್ ದಾಟಿ ವಿಶಾಲವಾದ
ತೆರೆದ ಪ್ರದೇಶ ಸಿಗುತ್ತದೆ. ಅಲ್ಲಿ ನಿಂತು ದಣಿವಾರಿಸುತ್ತಿರುವಾಗ ಅಚಾನಕ್ ನಮ್ಮ ಪತ್ರಕರ್ತ ಮಿತ್ರ
ವೇಣು ವಿನೋದರ ಮುಂದಿನ ಟಯರ್ ಇದ್ದಕ್ಕಿದ್ದಂತೇ ಠುಸ್ ಎಂದಿತು. ಇಂತಹ ಪರಿಸ್ತಿತಿಗೆಂದೇ ಚಿನ್ಮಯ ತಂದಿದ್ದ
ಟ್ಯೂಬ್ ಆಗ ಉಪಯೋಗಕ್ಕೆ ಬಂತು. ಟ್ಯೂಬ್ ಬದಲಾಯಿಸಿ, ಗಾಳಿ ತುಂಬಿಸಿ, ಪಯಣ ಮುಂದೆ ಸಾಗಿತು. ನಡುವೆ
ಆಮೆ ಮತ್ತು ಮೊಲದ ಕಥೆ ನೆನಪಾಗದೇ ಇರಲಿಲ್ಲ.
೧೮ ಕಿ.ಮೀ ಒಂದೇಸಮ ಏರಿದ ನಾವು ತಲುಪಿದ್ದು
ತುಂಗಾ ಮತ್ತು ಭದ್ರಾ ನದಿಗಳ ಉಗಮ ಸ್ಥಾನವಾದ ಗಂಗಾಮೂಲ ವನ್ನು. ಇನ್ನು ಮುಂದಕ್ಕೆ ಎಳಿಜಾರು
ಎಂದಾಗ ಎಲ್ಲರ ಮೊಗದಲ್ಲೂ ಅಬ್ಬಾ ಬಚಾವ್ ಎಂಬ ಭಾವ ಮೂಡಿತ್ತು, ಏಕೆಂದರೆ ಎಲ್ಲರ ಬಳಿ ಇದ್ದ ತಿಂಡಿಗಳೆಲ್ಲ
ಖಾಲಿಯಾಗಿದ್ದವು. ಎಲ್ಲರ ಹೊಟ್ಟೆ ತಾಳ ಹಾಕುತ್ತಿತ್ತು. ಒಮ್ಮೆ ಹೊಟ್ಟೆ ತುಂಬಾ ತಿಂದರೆ ಸಾಕು ಎಂಬಷ್ಟು
ಹಸಿವು ಕಾಡುತ್ತಿತ್ತು. ಒಳಗಿದ್ದ ಶಕ್ತಿಯನ್ನೆಲ್ಲಾ ಬಳಸಿ ಅಂತೂ ಕುದುರೆಮುಖ ಪಟ್ಟಣ ತಲುಪಿದೆವು.
ಮಂಗಳೂರಿನಿಂದ ಹೊರಟು ೮ ತಾಸುಗಳ ಸೈಕಲ್ ಸವಾರಿ
ಮುಗಿಸಿ, ಕುದುರೆಮುಖ ಪಟ್ಟಣದ ಸಹ್ಯಾದ್ರಿ ಭವನ ತಲುಪಿದಾಗ ೨ಗಂಟೆ ೩೦ನಿಮಿಷ. ಮುಕ್ಕಾಲು ಗಂಟೆಯ ದೀರ್ಘ
ಕಾಯುವಿಕೆಯ ನಂತರ ಬಿಸಿಬಿಸಿ ಅನ್ನ, ಸಾರು, ಸಾಂಬಾರು, ಹಪ್ಪಳ, ಪಲ್ಯ, ಮೊಸರು ಸಿಕ್ಕಾಗ ನಮಗೆ ಹಬ್ಬದೂಟ
ಸಿಕ್ಕ ಹಾಗಾಗಿತ್ತು.
ಅದೇ ದಿನ ಹಿಂದಿರುಗುವ ಪ್ಲಾನ್ ಮಾಡಿ ಬಂದ ನಮಗೆ ಹಿಂದೆ ಹೋಗುವುದು ಅಸಾಧ್ಯ ಎಂಬಷ್ಟು ಸುಸ್ತಾಗಿತ್ತು.
ಅಲ್ಲೇ ರೂಮ್ ಪಡೆದು ಪವಡಿಸುವ ಯೋಚನೆಗೆ ಎಲ್ಲರೂ ಸೈ ಎಂದರು. ನಮ್ಮ ನಮ್ಮ ಜೋಬುಗಳನ್ನು ತಡಕಾಡಿದಾಗ
ನಮ್ಮ ಬಳಿ ವಿಟಾಮಿನ್ ಎಂ (ಅಂದರೆ ಹಣ) ಕೊರತೆ ಇರುವುದು ಗೊತ್ತಾಯಿತು. ಕುದುರೆಮುಖ ಪಟ್ಟಣದಲ್ಲಿ ಯಾವುದೇ
ಎ.ಟಿ.ಎಂ ಇರಲಿಲ್ಲ. ಕೊನೆಗೊಂದು ಉಪಾಯ ಹೊಳೆದು ಅರಣ್ಯ ಇಲಾಖೆಯ ಭಗವತೀ ನಿಸರ್ಗಧಾಮದಲ್ಲಿ ಡಾರ್ಮೆಟ್ರಿ
ರೂಮ್ ಪಡೆದೆವು.
ಮತ್ತೆ ೧೦ಕಿ.ಮೀ ಸೈಕಲ್ ತುಳಿದು, ದಾರಿಮಧ್ಯೆ
ಲಕ್ಯಾ ಅಣೆಕಟ್ಟು ಕಂಡು, ಸುಮಾರು ೬.೩೦ಕ್ಕೆ ನಿಸರ್ಗ
ಧಾಮ ತಲುಪಿದೆವು. ಸಂಜೆಯ ಚಹಾ ಕುಡಿದು, ಸ್ನಾನ ಮಾಡಿ ಹಗುರಾಗಿ ಮತ್ತದೇ ಬಟ್ಟೆ ಧರಿಸಿ (ಬೇರೆ ಬಟ್ಟೆ
ಇಲ್ಲದ ಕಾರಣ) ರಾತ್ರಿಯ ನಿದ್ರೆಗೆ ಜಾರಿದೆವು. ತಂಪಾದ ವಾತಾವರಣ, ಒಳ್ಳೆ ಊಟ, ದಣಿವು ಸೇರಿ ನಿದ್ರೆ
ಬಲುಬೇಗ ಕಣ್ಣು ಹತ್ತಿತ್ತು.
photo credits Chinmaya Delampady
photo credits Chinmaya Delampady
ಇಂತೀ ಸಂಕ್ರಾಂತಿ ಸೈಕಲ್ ಯಾನ ಭಾಗ ೧
ಎಲಾ ಈ ಮೀಸೆ ಮಾಮನ ಕಾರ್ಬಾರೇ. Retired but not tired ಎ೦ಬತೆ. ನನಗೂ ಗಾಳಿ ಹಾಕುತ್ತಿದ್ದಾನೆ ಸೈಕಲ್ ಪ೦ಪನಲ್ಲಿ. ನೀನು ಸೈಕಲ್ ಹತ್ತು ಎ೦ದು. ಇರ್ಲಿ ಅರವಿ೦ದರೆ.ನೀವಾದರು ಮಾಡಿ ತೋರಿಸಿದ್ರಲ್ಲ ಸಾಹಸ. ಸ೦ತೋಷ. ಅಲ್ಲಾ ನಿಮ್ ಪ್ರಾಯ ಎಷ್ಟು ಈ ಮೀಸೆ ಮಾಮನ್ಡೆಷ್ಟು? ಎರಡನೇ ಭಾಗವನ್ನು ಕಾಯುತ್ತಿರುತ್ತೇನೆ.
ReplyDeleteGood one... Share some photos yar...
ReplyDeleteGood one... Share some photos yar...
ReplyDeleteಬರಲಿ ಬೇಗ 2ನೇ ಭಾಗ :)
ReplyDeleteಸುಂದರ ನಿರೂಪಣೆ