ಸಂಕ್ರಾಂತಿ ಸೈಕಲ್ ಯಾನ ಭಾಗ ೨
ಸಂಕ್ರಾಂತಿಯ
ಸಡಗರಕ್ಕೆಂದು ಹೊಸಾ ಸೈಕಲ್ ಏರಿ ಕುದುರೆಮುಖ ಏರಿದ ಕಥೆ ಅರ್ಧದಲ್ಲೇ ಬಾಕಿಯಾಗಿದೆ. ಹೋದದಿನವೇ
ಮರಳುವುದೆಂದು ಹೊರಟ ನಾವು ಮಾಳ ಘಾಟಿ ಏರಿ ಏರಿ ದಣಿದು, ಆ ದಿನವೇ ಹಿಂದೆ ಬರುವ ನಿರ್ಧಾರ ಬದಲಿಸಿ
ಅರಣ್ಯವಾಸಿಗಳಾದ ಕಥೆ ಹಿಂದಿನ ಭಾಗದಲ್ಲಿ ಓದಿದ್ದೀರಿ. ಭಗವತೀ ನಿಸರ್ಗಧಾಮದಲ್ಲಿ ಭೂರಿಭೋಜನ
ಸವಿದು, ಒಂದಷ್ಟು ಹರಟೆ ಹೊಡೆದು ಮಲಗಿದ ನಮಗೆ ಸೊಂಪಾದ ನಿದ್ದೆ. ಬೆಳಗ್ಗೆ ಎಚ್ಚರವಾಗದೇ ಹೋದರೆ
ಎಂದು ಮುಂಜಾಗರೂಕರಾದ ನಾವು ಎಚ್ಚರ ಗಂಟೆ(ಅಲರಾಂ) ಇಟ್ಟೇ ನಿದ್ದೆಗೆ ಜಾರಿದ್ದೆವು.
ಸೊಂಪಾಗಿ ನಿದ್ದೆ
ಬಂದದ್ದರಿಂದ ಬೆಳಗ್ಗೆ ಬೇಗನೇ ಎಚ್ಚರವಾಯಿತು. ಗಡಿಯಾರ ೫.೪೦ ತೋರಿಸುತ್ತಿತ್ತು. ಉಳಿದ ಮೂವರು
ಎದ್ದಿರುವರೇ ಎಂದು ನೋಡಿದರೆ ಪುಣ್ಯಾತ್ಮ ಮೀಸೆ ಮಾಮ ಆಗಲೇ ಎದ್ದು ನಿತ್ಯಕರ್ಮಾದಿಯಲ್ಲಿ
ತೊಡಗಿದ್ದರು. ಒಬ್ಬೊಬ್ಬರಾಗಿ ಎದ್ದು ತಯಾರಾದೆವು. ಹೊರಗಡೆ ಪೂರ್ತಿ ಮಂಜು ಕವಿದು ೨೦ ಅಡಿ ದೂರವೂ
ಕಾಣದಾಗಿತ್ತು. ನಮ್ಮ ಸೈಕಲೇಶ್ವರರನ್ನು ಸಜ್ಜುಗೊಳಿಸಿದೆವು. ಆಡುಗೆಯ ರಾಜು ಎದ್ದು ಒಲೆಮುಂದೆ
ಚಳಿ ಕಾಯಿಸುತ್ತಾ ಕುಳಿತಿದ್ದ. ನಮ್ಮನ್ನು ಕಂಡು ಖುಶಿಯಿಂದಲೇ ಚಹಾ ಮಾಡಿಕೊಟ್ಟ. ಎರಡೆರಡು ಚಹಾ
ಏರಿಸಿ, ಬಾಡಿ ಎಂಜಿನ್ ಹೀಟ್ ಮಾಡಿಕೊಂಡು ಹೊರಟೆವು. ಮುಖ್ಯ ರಸ್ತೆಯವರೆಗೂ ತಳ್ಳು ಗೋವಿಂದಾ ಮಾಡಿ
ಸರಿಯಾಗಿ ೭ ಗಂಟೆಗೆ ನಮ್ಮ ಸವಾರಿ ಶುರು.
ಹೊಟ್ಟೆ ಗಟ್ಟಿಯಾದ ಖುಶಿಯೋ ಏನೋ ಕಾಲುಗಳು ತುಸು ವೇಗವಾಗಿಯೇ ತುಳಿಯಲಾರಂಭಿಸಿದವು. ಬಿಸಿಲು ನಿಧಾನವಾಗಿ ಏರಲಾರಂಭಿಸಿತ್ತು. ರಸ್ತೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗತೊಡಗಿತು. ಬಜಗೋಳಿ, ಕಾರ್ಕಳ, ನಿಟ್ಟೆ ದಾಟಿ ಬೆಳ್ಮಣ್ ತಲುಪಿದಾಗ ಎಲ್ಲರಿಗೂ ಬಾಯಾರಿಕೆ. ಕಬ್ಬಿನ ಹಾಲು ಕುಡಿದು ದಾಹ ತೀರಿಸಕೊಂಡು ಮುಂದೆ ಸಾಗಿದೆವು. ನಡುನಡುವೆ ನಮ್ಮೀ ಯಾನದ ನಿರ್ದೇಶಕರಾದ ಮೀಸೆಮಾಮ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಪಡುಬಿದ್ರೆ ತಲುಪಿದಾಗ ನನ್ನ ಮತ್ತು ಚಿನ್ಮಯನ ನೀರಿನ ಖಜಾನೆ ಬರಿದಾಗತೊಡಗಿತ್ತು. ನೀರು ತುಂಬಿಸಿಕೊಂಡು ಹೆಜಮಾಡಿಯ ಚೆಕ್ ಪೋಸ್ಟ್ ಬಳಿ ಬಂದಾಗ ಮೀಸೆ ಮಾಮ ಮತ್ತು ವೇಣುವಿನೋದ ನಮ್ಮ ದಾರಿ ಕಾಯುತ್ತಿದ್ದರು. ಕುದುರೆಮುಖದಿ ಕೊಂಡು ತಂದ ಕಡಲೆಮಿಠಾಯಿ (ಚಿಕ್ಕಿ) ತಿಂದು ಮುಂದುವರೆದಾಗ ಗಂಟೆ ನಡು ಮಧ್ಯಾಹ್ನ ೧೨.
ನೆಕ್ಸ್ಟ್ ಸ್ಟಾಪ್ ಸುರತ್ಕಲ್ ಎಂದು ನಿರ್ಧರಿಸಿದೆವು.
ಮರಳಿ ಮನೆಗೆ ಎಂಬ ಖುಶಿಯಲ್ಲಿ ವೇಗವಾಗಿ ಸೈಕಲ್ ತುಳಿಯಲು ಪ್ರಾರಂಭಿಸಿದೆವು. ಬಿಸಿಲಿನ ತಾಪ ಹೆಚ್ಚು
ಹೊತ್ತು ನಮಗೂ ಬೇಡವಾಗಿತ್ತು. ಸುರತ್ಕಲ್ ನಲ್ಲಿ ವೇಣುವನ್ನು ಬೀಳ್ಕೊಂಡು ಕೊಟ್ಟಾರ ಚೌಕಿಯಾಗಿ ಮನೆ
ತಲುಪಿದಾಗ ಸುಮಾರು ೧.೩೦.
ನನಗಂತೂ ಈ ಯಾನ ತುಂಬಾ ಹೊಸವಿಚಾರ ಕಲಿಸಿ ಕೊಟ್ಟಿತು.
ಗಿಯರ್ ಸಿಸ್ಟಂ ಅನ್ನು ಸಮರ್ಥವಾಗಿ ಬಳಸುವ ಕಲೆ ಅರ್ಥವಾಯಿತು. ಇನ್ನು ಸೈಕ್ಲಿಂಗ್ ಗೆಂದು ಕೊಂಡ ಹೊಸ
ಉಡುಪು ಸವಾರಿಯನ್ನು ಸುಲಭ ಗೊಳಿಸುವುದು ತಿಳಿಯಿತು. ದೂರಸವಾರಿ ಮಾಡುವಾಗ ದೇಹಕ್ಕೆ ನೀರಿನ ಪೂರೈಕೆಯ
ಮಹತ್ವ ಅರ್ಥವಾಯಿತು. ಜೊತೆಗೆ ಗುರಿ ಖಂಡಿತಾ ತಲುಪುತ್ತೇನೆ ಎಂಬ ಮಾನಸಿಕ ದ್ರುಢತೆ ಸವಾರಿಯನ್ನು ಆರಾಮ
ಗೊಳಿಸುತ್ತದೆ.
ತಮ್ಮ ೬೦ರ ಹರೆಯದಲ್ಲೂ, ೩೦ರ ಹರೆಯದ ನಮ್ಮನ್ನೂ
ನಾಚಿಸುವಂತೆ ಮೀಸೆಮಾಮ ಅಶೋಕವರ್ಧನರು ಒಂದೇಸಮನೆ ಸೈಕಲ್ ತುಳಿದ ಪರಿ ಮಾತ್ರ ಅವರ್ಣನೀಯ. ಅವರಂತಹಾ
ಹಿರಿಯ ನಮ್ಮ ಜೊತೆಗೆ ಇದ್ದುದು ನಮ್ಮ ಉತ್ಸಾಹ ಇನ್ನೂ ಹೆಚ್ಚು ಮಾಡಿತ್ತು. ಅವರೊಂದಿಗೆ ಇನ್ನಷ್ಟು
ಸಹವಾಸ ಸಿಗಲಿ, ಕಲಿಕೆಗೆ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ. ಜೊತೆಗೆ ಮಿತ್ರರಾದ ವೇಣು ವಿನೋದ ಮತ್ತು
ಚಿನ್ಮಯರಿಗೂ ಧನ್ಯವಾದ.
ಇಂತಿ ಸಂಕ್ರಾಂತಿ ಸೈಕಲ್ ಯಾನ
ಚಿತ್ರ ಕ್ರುಪೆ ವೇಣುವಿನೋದ ಹಾಗೂ ಚಿನ್ಮಯ ದೇಲಂಪಾಡಿ